ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮುಗಿದ ನಂತರ ವಿವಾದಿತ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಅವರನ್ನು ಪೊಲೀಸ್ ಮಹಾನಿರ್ದೇಶಕರಾಗಿ (DGP) ಮರುನೇಮಕಗೊಳಿಸಿ ರಾಜ್ಯ ಗೃಹ ಇಲಾಖೆ ಸೋಮವಾರ ಸಂಜೆ ಆದೇಶ ಹೊರಡಿಸಿದೆ.
ಚುನಾವಣೆಗೆ ಮುನ್ನ ಭಾರತೀಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಶುಕ್ಲಾ ಅವರನ್ನು ಡಿಜಿಪಿ ಹುದ್ದೆಯಿಂದ ವಜಾಗೊಳಿಸಿದ ನಂತರ ಸಂಜಯ್ ಕುಮಾರ್ ವರ್ಮಾ ಅವರು ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಶುಕ್ಲಾ ಅವರನ್ನು ಚುನಾವಣೆಯಿಂದ ದೂರವಿಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತ್ತು.
ಭಾರತೀಯ ಪೊಲೀಸ್ ಸೇವೆಯ ಹಿರಿಯ ಅಧಿಕಾರಿಯಾಗಿರುವ ವರ್ಮಾ ಅವರು ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಡಿಜಿಪಿಯಾಗಿ ಇರಬೇಕಿತ್ತು. ಆದರೆ ಚುನಾವಣೆ ವೇಳೆ ಶುಕ್ಲಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿತ್ತು.
ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡು ಚುನಾವಣಾ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಸೋಮವಾರದಿಂದ ಸ್ಥಗಿತಗೊಂಡಿದೆ ಎಂದು ಗೃಹ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.
ನೀತಿ ಸಂಹಿತೆ ಸ್ಥಗಿತ ಹಿನ್ನೆಲೆಯಲ್ಲಿ ಸರ್ಕಾರ ಶುಕ್ಲಾ ಅವರ ಕಡ್ಡಾಯ ರಜೆ ಅವಧಿಯನ್ನು ಕೊನೆಗೊಳಿಸಿದ್ದು, ಡಿಜಿಪಿಯಾಗಿ ಮುಂದುವರೆಯಲು ಅವರಿಗೆ ಸೂಚಿಸಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟವು ಭರ್ಜರಿ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಂಡಿದೆ.
Advertisement