ಇಂಫಾಲ್: ಹಿಂಸಾಚಾರ ಪೀಡಿತವ ಈಶಾನ್ಯ ರಾಜ್ಯ ಮಣಿಪುರದಲ್ಲಿ ಸಹಜ ಸ್ಥಿತಿಗೆ ಒತ್ತಾಯಿಸಿ ಇಂಡಿಯಾ ಬಣ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಯೋಜಿಸುತ್ತಿದೆ ಎಂದು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೇಶಾಮ್ ಮೇಘಚಂದ್ರ ಅವರು ಗುರುವಾರ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಉದ್ದೇಶಿತ ಪ್ರತಿಭಟನೆಯಲ್ಲಿ ಇಂಡಿಯಾ ಮೈತ್ರಿಕೂಟದ ರಾಷ್ಟ್ರೀಯ ನಾಯಕರು ಭಾಗವಹಿಸಬಹುದು ಎಂದು ಅವರು ತಿಳಿಸಿದ್ದಾರೆ.
ಮಣಿಪುರವು ಕಳೆದ ವರ್ಷ ಮೇ ತಿಂಗಳಿನಿಂದ ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿದೆ. 250 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇದನ್ನು ಖಂಡಿಸಿ ಇಂಡಿಯಾ ಬ್ಲಾಕ್ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.
"ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ಯಾವಾಗ ಕೊನೆಗೊಳಿಸಲು ರಾಜ್ಯ ಸರ್ಕಾರ ಯೋಜಿಸುತ್ತಿದೆ? ಮತ್ತು ಏಕೆ ಹಿಂಸಾಚಾರ ಮೇಲುಗೈ ಸಾಧಿಸಲು ಅವಕಾಶ ಮಾಡಿಕೊಟ್ಟಿದೆ? ಎಂದು ಮೇಘಚಂದ್ರ ಅವರು ಮಣಿಪುರ ಸರ್ಕಾರವನ್ನು ಪ್ರಶ್ನಿಸಿದರು.
ನಾವು ಹಲವು ಬಾರಿ ರಾಜಕೀಯ ಪಕ್ಷಗಳ ಸಭೆ ಕರೆಯುವಂತೆ ಮನವಿ ಮಾಡಿದ್ದೇವೆ ಮತ್ತು ರಾಜ್ಯಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿಗೆ ಒತ್ತಾಯಿಸಿದ್ದೇವೆ. ಮಣಿಪುರ ಜನರ ಧ್ವನಿಯನ್ನು ಸರ್ಕಾರ ಕೇಳದ ಕಾರಣ ಪರಿಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿದರು.
Advertisement