ಅದಾನಿ, ಸಂಭಾಲ್ ಹಿಂಸಾಚಾರ ಗದ್ದಲ; ಸಂಸತ್ತಿನಲ್ಲಿ ಕೋಲಾಹಲ; ಉಭಯ ಸದನ ಕಲಾಪ ನಾಳೆಗೆ ಮುಂದೂಡಿಕೆ

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಲಾಪವನ್ನು ಆರಂಭದಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿತ್ತು. ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದವು.
Parliament
ಸಂಸತ್ತಿನ ಲೋಕಸಭೆ ಕಲಾಪ
Updated on

ನವದೆಹಲಿ: ಉದ್ಯಮಿ ಗೌತಮ್ ಅದಾನಿ ಲಂಚ ಪ್ರಕರಣ, ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಹಿಂಸಾಚಾರ ಮತ್ತಿತರ ವಿಷಯಗಳ ಕುರಿತು ಪ್ರತಿಪಕ್ಷಗಳ ಸದಸ್ಯರ ಪ್ರತಿಭಟನೆಯ ನಡುವೆಯೇ ಸಂಸತ್ತಿನ ಉಭಯ ಸದನಗಳನ್ನು ನಾಳೆ ಶುಕ್ರವಾರಕ್ಕೆ ಮುಂದೂಡಲಾಗಿದೆ.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಲಾಪವನ್ನು ಆರಂಭದಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿತ್ತು. ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದವು, ಪರಿಣಾಮವಾಗಿ ಉಭಯ ಸದನಗಳನ್ನು ನಾಳೆಗೆ ಮುಂದೂಡಲಾಗಿದೆ.

ಇಂದು ಬೆಳಗ್ಗೆ ಲೋಕಸಭೆ ಕಲಾಪ ಆರಂಭವಾದಾಗ ಇತ್ತೀಚಿನ ಉಪ ಚುನಾವಣೆಯಲ್ಲಿ ಕೇರಳದ ವಯನಾಡಿನಿಂದ ಆಯ್ಕೆಯಾದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮಹಾರಾಷ್ಟ್ರದ ನಾಂದೇಡ್‌ನಿಂದ ಚುನಾಯಿತರಾದ ರವೀಂದ್ರ ವಸಂತರಾವ್ ಚವಾಣ್ ಅವರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇಬ್ಬರು ಹೊಸ ಸದಸ್ಯರ ಪ್ರಮಾಣ ವಚನ ಸ್ವೀಕಾರದ ನಂತರ, ಅದಾನಿ ಗ್ರೂಪ್ ವಿರುದ್ಧದ ಆರೋಪಗಳು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಲು ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳ ಸದಸ್ಯರು ಪ್ರಸ್ತಾಪಿಸಿದರು.

ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಕೆಲವು ಸದಸ್ಯರು ಬಾವಿಗಿಳಿದು ಪ್ರತಿಭಟನೆ ಮಾಡಿದರೆ ಇತರ ವಿರೋಧ ಪಕ್ಷದ ಸದಸ್ಯರು ಹಜಾರದಲ್ಲಿ ನಿಂತು ಘೋಷಣೆಗಳನ್ನು ಕೂಗಿದರು. ಸ್ಪೀಕರ್ ಓಂ ಬಿರ್ಲಾ ಅವರು ಪ್ರಶ್ನೋತ್ತರ ಅವಧಿಗೆ ಅವಕಾಶ ನೀಡುವಂತೆ ವಿರೋಧ ಪಕ್ಷದ ಸದಸ್ಯರನ್ನು ಕೇಳಿದರು.

ಜನರ ನಿಜವಾದ ಸಮಸ್ಯೆಯನ್ನು ಎತ್ತಲು ಜನರು ಸಂಸದರನ್ನು ತಮ್ಮ ಪ್ರತಿನಿಧಿಗಳಾಗಿ ಆಯ್ಕೆ ಮಾಡಿ ಕಳುಹಿಸುತ್ತಾರೆ. ಆದರೆ ಅವರು ಸದನದ ಕಲಾಪಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಅದು ಒಳ್ಳೆಯದಲ್ಲ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.

ಸಂವಿಧಾನ ರಚನಾ ಸಭೆಯಲ್ಲೂ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಗೌರವಯುತವಾಗಿ ಬೆಳೆಸಲಾಗಿದೆ ಎಂದರು. ಗದ್ದಲದ ನಡುವೆ, ಒಂದು ಪ್ರಶ್ನೆಯನ್ನು ಕೈಗೆತ್ತಿಕೊಳ್ಳಲಾಯಿತು. ಪ್ರತಿಭಟನೆ ಮುಂದುವರಿದ ಕಾರಣ ಸ್ಪೀಕರ್ ಸದನವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.

Parliament
ಲಂಚ ಆರೋಪದಡಿ ಗೌತಮ್ ಅದಾನಿ ಬಂಧಿಸಬೇಕು, ಸರ್ಕಾರ ಅವರನ್ನು ರಕ್ಷಿಸುತ್ತಿದೆ: ರಾಹುಲ್ ಗಾಂಧಿ

ರಾಜ್ಯಸಭೆ ಮೇಲ್ಮನೆಯಲ್ಲಿ ಬೆಳಗಿನ ಅಧಿವೇಶನದಲ್ಲಿ ಪಟ್ಟಿ ಮಾಡಲಾದ ವಿಷಯಗಳನ್ನು ಪ್ರಸ್ತಾಪಿಸಿದ ನಂತರ ಸಭಾಪತಿ ಜಗದೀಪ್ ಧನಕರ್ ಅವರು ಸದನದ ನಿಯಮ 267 ರ ಅಡಿಯಲ್ಲಿ ನಿಗದಿತ ವ್ಯವಹಾರವನ್ನು ಮುಂದೂಡಲು 16 ಸೂಚನೆಗಳನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದರು. ಎಲ್ಲಾ ನೋಟಿಸ್‌ಗಳನ್ನು ತಿರಸ್ಕರಿಸುತ್ತಿರುವುದಾಗಿ ಸಭಾಪತಿ ತಿಳಿಸಿದ್ದಾರೆ.

ಅದಾನಿ ಗ್ರೂಪ್ ವಿರುದ್ಧದ ಭ್ರಷ್ಟಾಚಾರದ ಆರೋಪಗಳು, ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದ ಕೋಮು ಹಿಂಸಾಚಾರ ಮತ್ತು ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗಳ ಕುರಿತು ಚರ್ಚೆಗಾಗಿ ವಿರೋಧ ಪಕ್ಷದ ಸದಸ್ಯರು ನೊಟೀಸ್ ನೀಡಿದರು. ಅದಾನಿ ವಿಚಾರದಲ್ಲಿ ಚರ್ಚೆಗೆ ನೋಟಿಸ್ ನೀಡಿದ್ದ ಕಾಂಗ್ರೆಸ್ ನ ಪ್ರಮೋದ್ ತಿವಾರಿ ಅವರು ತಮ್ಮ ನೋಟಿಸ್ ತಿರಸ್ಕಾರದ ಬಗ್ಗೆಯೂ ‘ಪಾಯಿಂಟ್ ಆಫ್ ಆರ್ಡರ್’ ಎತ್ತಿದ್ದರು.

ಪ್ರತಿಪಕ್ಷದ ಹಲವು ಸದಸ್ಯರು ತೀವ್ರ ಗದ್ದಲ, ಕೋಲಾಹಲ ನಡೆಸಿದ್ದರಿಂದ ಸಭಾಪತಿ ಸದನದ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com