ಮುಂಬೈ: ಸೀಟು ಹಂಚಿಕೆಯ ಮಾತುಕತೆ ಸಂದರ್ಭದಲ್ಲಿ ಕಾಂಗ್ರೆಸ್‌ನ "ಅತಿಯಾದ ಆತ್ಮವಿಶ್ವಾಸ" ಮತ್ತು "ಧೋರಣೆ" ಮಹಾ ವಿಕಾಸ್ ಅಘಾಡಿ(ಎಂವಿಎ) ನಿರೀಕ್ಷೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಶಿವಸೇನೆ(ಯುಬಿಟಿ)ಯ ಹಿರಿಯ ನಾಯಕರೊಬ್ಬರು ಟೀಕಿಸಿದ್ದಾರೆ.
MVA ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಬೇಕಿತ್ತು ಎಂದು ಮಹಾರಾಷ್ಟ್ರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ(LoP) ಅಂಬಾದಾಸ್ ದಾನ್ವೆ ಅವರು ಹೇಳಿದ್ದಾರೆ.
"ಫಲಿತಾಂಶಕ್ಕೂ ಮುಂಚೆಯೇ ಕಾಂಗ್ರೆಸ್ ನಾಯಕರು ಸೂಟ್ ಮತ್ತು ಟೈನೊಂದಿಗೆ ಸಿದ್ಧರಾಗಿದ್ದರು. ಅವರ ಅತಿಯಾದ ಆತ್ಮವಿಶ್ವಾಸವೇ" ಇತ್ತೀಚೆಗೆ ಮುಕ್ತಾಯಗೊಂಡ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸೋಲಿಗೆ ಕಾರಣ ಶಿವಸೇನಾ ನಾಯಕ ಟೀಕಿಸಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶದ ನಂತರ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಂತೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಅತಿಯಾದ ಆತ್ಮವಿಶ್ವಾಸವನ್ನು ಹೊಂದಿತ್ತು. ಅವರ ಈ ವರ್ತನೆ ಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿಸುತ್ತಿದೆ ಎಂದು ದಾನ್ವೆ ಹೇಳಿದ್ದಾರೆ.
ಸೀಟು ಹಂಚಿಕೆಯ ಮಾತುಕತೆಯ ಸಂದರ್ಭದಲ್ಲಿ ಕಾಂಗ್ರೆಸ್‌ನ ಧೋರಣೆಯು ಎಂವಿಎ ಭವಿಷ್ಯಕ್ಕೆ ಹಾನಿ ಮಾಡಿದೆ ಎಂದು ದಾನ್ವೆ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸಮರ್ಥವಾಗಿ ಕಾರ್ಯನಿರ್ವಹಿಸಿತ್ತು ಮತ್ತು 13 ಸ್ಥಾನಗಳನ್ನು ಗಳಿಸಿತು. ಇದು ಎಂವಿಎ ಮಿತ್ರಪಕ್ಷಗಳಲ್ಲಿ ಅತ್ಯಧಿಕವಾಗಿದೆ. ಈ ಯಶಸ್ಸು ರಾಜ್ಯ ಚುನಾವಣಾ ಮಾತುಕತೆಗಳ ಸಮಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಕಾಂಗ್ರೆಸ್ ಅನ್ನು ಪ್ರೇರೇಪಿಸಿತು. ಇದು ಮೈತ್ರಿಕೂಟದಲ್ಲಿ ಉದ್ವಿಗ್ನತೆಗೆ ಕಾರಣವಾಯಿತು. ಕಾಂಗ್ರೆಸ್ 103 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ, 16 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಏತನ್ಮಧ್ಯೆ, ಶಿವಸೇನೆ(ಯುಬಿಟಿ) 89 ಸ್ಥಾನಗಳಲ್ಲಿ ಸ್ಪರ್ಧಿಸಿ 20 ಸ್ಥಾನ ಪಡೆದರೆ, ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್‌ಸಿಪಿ) 87 ಸ್ಥಾನಗಳಲ್ಲಿ ಸ್ಪರ್ಧಿಸಿ 10 ಸ್ಥಾನಗಳನ್ನು ಗೆದ್ದಿದೆ.
ಬಿಜೆಪಿ ನೇತೃತ್ವದ ಮಹಾಯುತಿ 288 ಅಸೆಂಬ್ಲಿ ಸ್ಥಾನಗಳಲ್ಲಿ 230 ಸ್ಥಾನಗಳನ್ನು ಪಡೆದುಕೊಂಡು ನಿರ್ಣಾಯಕ ಗೆಲುವು ಸಾಧಿಸಿದರೆ, ಕಾಂಗ್ರೆಸ್‌ನ ಎಂವಿಎ ಮೈತ್ರಿಕೂಟ, ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಬಣ ಮತ್ತು ಶಿವಸೇನೆಯ ಉದ್ಧವ್ ಠಾಕ್ರೆ ಪಾಳಯ 46 ಸ್ಥಾನಗಳನ್ನು ಗೆದ್ದಿದೆ.
Advertisement