ನವದೆಹಲಿ: ಮಹಾರಾಷ್ಟ್ರ ಸರ್ಕಾರ ರಚನೆ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಏಕನಾಥ್ ಶಿಂಧೆ ಅವರ ಜೊತೆ ಉತ್ತಮ ಮತ್ತು ಸಕಾರಾತ್ಮಕ ಚರ್ಚೆ ನಡೆದಿದೆ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಕುರಿತು ಮುಂಬೈಯಲ್ಲಿ ಮಹಾಯುತಿ ಒಕ್ಕೂಟದ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಇನ್ನೊಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರವು ಮಹಾರಾಷ್ಟ್ರದಲ್ಲಿ ಭಾರಿ ಬಹುಮತವನ್ನು ದಾಖಲಿಸಿದ ನಂತರ ಮುಂದಿನ ಸರ್ಕಾರಕ್ಕಾಗಿ ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಳ್ಳಲು ಸಿಎಂ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರೊಂದಿಗೆ ನಿನ್ನೆ ರಾತ್ರಿ ದೆಹಲಿಗೆ ತೆರಳಿ ಅಮಿತ್ ಶಾ ಮತ್ತು ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಿದರು.
ಇನ್ನೊಂದೆರಡು ದಿನಗಳಲ್ಲಿ ಮಹಾರಾಷ್ಟ್ರ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅಂತಿಮ ನಿರ್ಧಾರವನ್ನು ನಾವೆಲ್ಲರೂ ಒಟ್ಟಾಗಿ ಕುಳಿತು ಚರ್ಚಿಸಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ರಾಜ್ಯದಲ್ಲಿ ಸರ್ಕಾರ ರಚನೆಗೆ ಅಡ್ಡಿಯಾಗುವುದಿಲ್ಲ ಮತ್ತು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇನೆ ಎಂದು ಹೇಳುವ ಮೂಲಕ ಅಧಿಕಾರ ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ, ಗೊಂದಲವಿದೆ ಎಂಬ ಊಹಾಪೋಹಕ್ಕೆ ತೆರೆಎಳೆದಿದ್ದಾರೆ.
ಅಮಿತ್ ಶಾ ಮತ್ತು ಜೆ ಪಿ ನಡ್ಡಾ ಅವರ ಜೊತೆಗೆ ನಡೆಸಿದ ಮಾತುಕತೆ ಫಲಪ್ರದವಾಗಿತ್ತು. ನಾವೆಲ್ಲರೂ ಸರ್ಕಾರ ರಚನೆಯ ಬಗ್ಗೆ ಚರ್ಚಿಸಿದ್ದೇವೆ. ಮಿತ್ರಪಕ್ಷಗಳ ನಡುವೆ ಉತ್ತಮ ಸಮನ್ವಯವಿದೆ, ಜನರು ನಮಗೆ ನೀಡಿದ ಸ್ಪಷ್ಟ ಆದೇಶವನ್ನು ನಾವು ಗೌರವಿಸುತ್ತೇವೆ. ನಾವು ಶೀಘ್ರದಲ್ಲೇ ಸರ್ಕಾರವನ್ನು ರಚಿಸುತ್ತೇವೆ ಎಂದು ಶಿವಸೇನೆ ನಾಯಕ ಏಕನಾಥ್ ಶಿಂಧೆ ಹೇಳಿದರು.
ಸಭೆಯು ಉತ್ತಮ ಮತ್ತು ಸಕಾರಾತ್ಮಕವಾಗಿತ್ತು. ಇದು ಮೊದಲ ಸಭೆ. ಮುಂಬೈನಲ್ಲಿ ಮಹಾಯುತಿಯ ಮತ್ತೊಂದು ಸಭೆ ನಡೆಯಲಿದೆ ಎಂದರು.
ನವೆಂಬರ್ 20 ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಿತ್ತು.
Advertisement