ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಭಾಯಿ ಜಗತಾಪ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ಕಿರೀಟ್ ಸೋಮಯ್ಯ ಚುನಾವಣಾ ಆಯೋಗ (ಇಸಿ) ಮತ್ತು ಮುಂಬೈ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಜಗತಾಪ್ ಅವರ ಹೇಳಿಕೆಯನ್ನು ಖಂಡಿಸಿದ ಅವರು, ಸಾಂವಿಧಾನಿಕ ಸಂಸ್ಥೆಯು ಇಂತಹ ಅಗೌರವವನ್ನು ಸಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕ ಭಾಯಿ ಜಗತಾಪ್ ಚುನಾವಣಾ ಆಯೋಗವನ್ನು ನಾಯಿಗೆ ಹೋಲಿಸಿದ್ದಾರೆ. ಚುನಾವಣಾ ಆಯೋಗಕ್ಕೆ ಈ ರೀತಿಯ ನಿಂದನೆ ಮತ್ತು ಅಗೌರವವು ಸಂಪೂರ್ಣವಾಗಿ ತಪ್ಪು. ಇಂತಹ ಅವಮಾನ ಸಹಿಸಲು ಸಾಧ್ಯವಿಲ್ಲ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೋಮಯ್ಯ ಆಗ್ರಹಿಸಿದ್ದಾರೆ.
ಈಗಾಗಲೇ ಚುನಾವಣಾ ಆಯೋಗ ಮತ್ತು ಮುಂಬೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಚುನಾವಣಾ ಆಯೋಗವನ್ನು ನಾಯಿಗೆ ಹೋಲಿಸಿ ಜಗತಾಪ್ ಹೇಳಿಕೆ ನೀಡಿದ ನಂತರ ವಿವಾದ ಭುಗಿಲೆದ್ದಿದೆ. "ಚುನಾವಣಾ ಆಯೋಗ ನಾಯಿಯಂತೆ ವರ್ತಿಸುತ್ತಿದ್ದು, ನರೇಂದ್ರ ಮೋದಿ ಅವರ ಬಂಗಲೆಯ ಮುಂದೆ ಕೂತಿರುವ ನಾಯಿ ಎಂದು ಅವರು ಹೇಳಿದ್ದಾರೆ.
ಚುನಾವಣಾ ಆಯೋಗ ಹಾಗೂ ಇತರ ಏಜೆನ್ಸಿಗಳನ್ನು ಆಡಳಿತಾರೂಢ ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬರ್ಥದಲ್ಲಿ ಜಗತಾಪ್ ನೀಡಿರುವ ಹೇಳಿಕೆ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ.
Advertisement