
ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆಯ ಮೂರನೇ ಮತ್ತು ಅಂತಿಮ ಹಂತದ ಮತದಾನದ ಮಂಗಳವಾರ ಮುಕ್ತಾಯವಾಗಿದ್ದು, ಶೇ.65ಕ್ಕೂ ಹೆಚ್ಚು ಮತದಾನವಾಗಿದೆ.
ಆಯೋಗದ ಅಂಕಿಅಂಶಗಳ ಪ್ರಕಾರ ಇಂದು ನಡೆದ ಅಂತಿಮ ಹಂತದ ಚುನಾವಣೆಯಲ್ಲಿ ಸಂಜೆ 5 ಗಂಟೆಯವರೆಗೆ ಶೇ. 65.48 ರಷ್ಟು ಮತದಾನವಾಗಿದೆ.
ಚಳಿಗಾಲದ ರಾಜಧಾನಿ ಜಮ್ಮು ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಏಳು ಜಿಲ್ಲೆಗಳ 40 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಗಿ ಭದ್ರತೆಯ ನಡುವೆ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಯಿತು ಮತ್ತು ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ.
ಇಂದು ನಡೆದ ಮೂರನೇ ಹಂತದ ಚುನಾವಣೆಯಲ್ಲಿ ಇಬ್ಬರು ಮಾಜಿ ಉಪಮುಖ್ಯಮಂತ್ರಿಗಳಾದ ತಾರಾ ಚಂದ್ ಮತ್ತು ಮುಜಾಫರ್ ಬೇಗ್ ಸೇರಿದಂತೆ 415 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
2019 ರ ಆಗಸ್ಟ್‌ನಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ನಡೆದಿದ್ದು, ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯ ವಿಶೇಷ ಮತಗಟ್ಟೆಗಳು ಸೇರಿದಂತೆ ಎಲ್ಲಾ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 18ರಂದು ನಡೆದ ಮೊದಲ ಹಂತದಲ್ಲಿ ಶೇ.61.38ರಷ್ಟು ಮತದಾನ ನಡೆದಿದ್ದರೆ, ಸೆಪ್ಟೆಂಬರ್ 26ರಂದು ನಡೆದ ಎರಡನೇ ಹಂತದಲ್ಲಿ ಶೇ.57.31ರಷ್ಟು ಮತದಾನವಾಗಿತ್ತು. ಮೂರನೇ ಹಂತದಲ್ಲಿ ಶೇ. 65ಕ್ಕೂ ಹೆಚ್ಚು ಮತದಾನವಾಗಿದ್ದು, ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.
Advertisement