ಭೋಪಾಲ್: ಮಧ್ಯ ಪ್ರದೇಶದ ಆಡಳಿತಾರೂಢ ಬಿಜೆಪಿಯ ಹಿರಿಯ ನಾಯಕರೊಬ್ಬರು ಮುಂಬರುವ ನವರಾತ್ರಿ ವೇಳೆ ಗರ್ಬಾ ಪೆಂಡಾಲ್ ಗೆ ಮುಸ್ಲಿಮರು ಪ್ರವೇಶಿಸಿದಂತೆ ತಡೆಯಲು ಅಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಕುಡಿಯಲು ಗೋಮೂತ್ರ ನೀಡಿ ಎಂದು ವಿಲಕ್ಷಣ ಸಲಹೆ ನೀಡಿದ್ದಾರೆ.
"ಗರ್ಬಾ ಪೆಂಡಾಲ್ ಗಳ ಪ್ರವೇಶದ್ವಾರದಲ್ಲಿ ಗೋಮೂತ್ರದ ಒಂದು ಗುಟುಕು ತೆಗೆದುಕೊಳ್ಳಬೇಕು. ಯಾವುದೇ ಹಿಂದೂಗಳು ಗರ್ಬಾ ಪೆಂಡಾಲ್ ಪ್ರವೇಶಿಸುವ ಮೊದಲು ಗೋಮೂತ್ರ ಕುಡಿಯುವುದನ್ನು ವಿರೋಧಿಸುವುದಿಲ್ಲ" ಎಂದು ಇಂದೋರ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಚಿಂಟು ವರ್ಮಾ ಅವರು ಹೇಳಿದ್ದಾರೆ.
"ಗೌಮೂತ್ರವು ನಮಗೆ ಗೌಮಾತೆಯಷ್ಟೇ ಪವಿತ್ರವಾಗಿದೆ(ಹಸು). ಅನಾದಿ ಕಾಲದಿಂದಲೂ ಇದನ್ನು ನಮ್ಮ ಋಷಿಮುನಿಗಳು ಶುದ್ಧೀಕರಣಕ್ಕಾಗಿ ಬಳಸುತ್ತಿದ್ದರು. ಆದ್ದರಿಂದ ಇದನ್ನು ಪ್ರತಿ ಗರ್ಬಾ ಪೆಂಡಾಲ್ ಹೊರಗೆ ಇರಿಸಬಹುದು ಮತ್ತು ಅದನ್ನು ಪ್ರಸಾದವಾಗಿ ಸೇವಿಸಲು ಯಾವುದೇ ಹಿಂದೂಗಳು ವಿರೋಧಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ವರ್ಮಾ ತಿಳಿಸಿದ್ದಾರೆ.
ಗರ್ಬಾ ಪೆಂಡಾಲ್ ಗಳಿಗೆ ಅನಗತ್ಯ ಜನರ(ಮುಸ್ಲಿಮರು) ಪ್ರವೇಶವನ್ನು ಪರಿಶೀಲಿಸಲು ಇದು ಸಹಾಯ ಮಾಡುತ್ತದೆ. ಆಧಾರ್ ಕಾರ್ಡ್‌ಗಳನ್ನು ನಕಲಿ ಮಾಡಬಹುದು. ಆದರೆ, ಒಬ್ಬ ವ್ಯಕ್ತಿಯು ಹಿಂದೂ ಆಗಿದ್ದರೆ, ಅವನು ಪ್ರಸಾದವಾಗಿ ಗೋಮೂತ್ರವನ್ನು ಸ್ವೀಕರಿಸಿದ ನಂತರವೇ ಗರ್ಬಾ ಪೆಂಡಾಲ್ ಪ್ರವೇಶಿಸುತ್ತಾನೆ ಮತ್ತು ಅದನ್ನು ನಿರಾಕರಿಸುವ ಪ್ರಶ್ನೆಯೇ ಇಲ್ಲ” ಎಂದು ವರ್ಮಾ ಹೇಳಿದ್ದಾರೆ.
ಚಿಂಟು ವರ್ಮಾ ಅವರ ವಿಲಕ್ಷಣ ಸಲಹೆಯನ್ನು ಲೇವಡಿ ಮಾಡಿದ ಪ್ರತಿಪಕ್ಷ ಕಾಂಗ್ರೆಸ್‌ನ ರಾಜ್ಯ ಘಟಕದ ವಕ್ತಾರ ನೀಲಭ್ ಶುಕ್ಲಾ, ಬಿಜೆಪಿ ನಾಯಕರು ಗೋವಿನ ರಾಜಕೀಯ ಮಾಡುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಗೋಶಾಲೆಗಳಲ್ಲಿನ ಗೋವುಗಳ ದುಸ್ಥಿತಿಯ ವಿಚಾರದಲ್ಲಿ ಬಿಜೆಪಿ ನಾಯಕರು ಏಕೆ ಮೌನವಾಗಿದ್ದಾರೆ? ಇಂತಹ ಸಲಹೆಗಳು ಮತ್ತು ಬೇಡಿಕೆಗಳನ್ನು ಎತ್ತುವ ಗೋಮೂತ್ರ ಆಚಮನ(ಸಿಪ್ಪಿಂಗ್) ಬಿಜೆಪಿಯ ಕೋಮು ಧ್ರುವೀಕರಣದ ರಾಜಕೀಯಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದಿದ್ದಾರೆ.
Advertisement