ವಾರಾಣಸಿ: 14 ಹಿಂದೂ ದೇವಾಲಯಗಳಿಂದ ಸಾಯಿಬಾಬ ಮೂರ್ತಿಗಳ ತೆರವು!

ಸಾಯಿಬಾಬಾ ಮುಸ್ಲಿಂ ವ್ಯಕ್ತಿಯಾಗಿದ್ದು, ಅವರಿಗೂ ಸನಾತನ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಹಿಂದೂ ಸಂಘಟನೆಗಳಿಂದ ಇನ್ನೂ 28 ದೇವಾಲಯಗಳಲ್ಲಿ ಸಾಯಿ ಬಾಬಾ ವಿಗ್ರಹ ತೆರವಿನ ಗುರಿ.
ಸಾಯಿಬಾಬಾ ಮೂರ್ತಿ ಸಾಂದರ್ಭಿಕ ಚಿತ್ರ
ಸಾಯಿಬಾಬಾ ಮೂರ್ತಿ ಸಾಂದರ್ಭಿಕ ಚಿತ್ರ
Updated on

ವಾರಾಣಸಿ: ಹಿಂದೂ ದೇವಾಲಯಗಳಲ್ಲಿ ಸಾಯಿ ಬಾಬಾ ಮೂರ್ತಿಗಳ ಪ್ರತಿಷ್ಠಾಪನೆ ವಿಚಾರದಲ್ಲಿ ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿವಾದ ಭುಗಿಲೆದ್ದಿದೆ. ಪ್ರಸಿದ್ಧ ಬಡಾ ಗಣೇಶ ದೇವಸ್ಥಾನ ಸೇರಿದಂತೆ ಈವರೆಗೂ 14ಕ್ಕೂ ಹೆಚ್ಚು ದೇವಾಲಯಗಳಿಂದ ಸಾಯಿಬಾಬಾ ಅವರ ಮೂರ್ತಿಯನ್ನು ತೆರವುಗೊಳಿಸಲಾಗಿದೆ. ಸನಾತನ ರಕ್ಷಕ ದಳದ ನೇತೃತ್ವದಲ್ಲಿ ಈ ತೆರವು ಕಾರ್ಯ ನಡೆದಿದೆ.

ಸಾಯಿಬಾಬಾ ಮುಸ್ಲಿಂ ವ್ಯಕ್ತಿಯಾಗಿದ್ದು, ಅವರಿಗೂ ಸನಾತನ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಹಿಂದೂ ಸಂಘಟನೆಗಳಿಂದ ಇನ್ನೂ 28 ದೇವಾಲಯಗಳಲ್ಲಿ ಸಾಯಿ ಬಾಬಾ ವಿಗ್ರಹ ತೆರವಿನ ಗುರಿ ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಾವು ಸಾಯಿಬಾಬಾ ಅವರ ವಿರೋಧಿಗಳಲ್ಲ.ಆದರೆ ಅವರ ಮೂರ್ತಿಗಳನ್ನು ದೇವಾಲಯಗಳಲ್ಲಿ ಸ್ಥಾಪಿಸಲು ಬಿಡುವುದಿಲ್ಲ ಎಂದು ಸನಾತನ ರಕ್ಷಕ ದಳದ ಅಧ್ಯಕ್ಷ ಅಜಯ್ ಶರ್ಮಾ ಹೇಳಿದ್ದಾರೆ.

ಸಾಯಿಬಾಬಾ ಅನುಯಾಯಿಗಳು ಅವರಿಗಾಗಿಯೇ ಗುಡಿ ನಿರ್ಮಿಸಿ, ಅಲ್ಲಿಯೇ ಪೂಜಿಸಲಿ. ಸನಾತನ ಧರ್ಮದಲ್ಲಿ ಅವರ ಮೂರ್ತಿ ಸ್ಥಾಪನೆಗೆ ಅವಕಾಶವಿಲ್ಲ. ಸನಾತನ ಧರ್ಮದ ದೇಗುಲಗಳಲ್ಲಿ ಐದು ದೇವರ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಪೂಜೆಗಷ್ಟೇ ಅವಕಾಶವಿದೆ. ಇದರಲ್ಲಿ ಸೂರ್ಯ, ವಿಷ್ಣು, ಶಿವ, ಶಕ್ತಿ ಹಾಗೂ ಗಣೇಶ ಮೂರ್ತಿಗಳ ಆರಾಧನೆಗಷ್ಟೇ ಅವಕಾಶ ಎಂದಿದ್ದಾರೆ.

ಭೂತೇಶ್ವರ ಹಾಗೂ ಅಗಸ್ತೇಶ್ವರ ದೇವಾಲಯಗಳಲ್ಲಿರುವ ಸಾಯಿಬಾಬು ಮೂರ್ತಿಗಳನ್ನು ಮುಂದಿನ ವಾರದೊಳಗೆ ತೆರವುಗೊಳಿಸಲಾಗುವುದು ಎಂದು ಶರ್ಮಾ ಹೇಳಿದ್ದಾರೆ. ಸಾಯಿಬಾಬಾ ಹಿಂದೂ ದೇವರಲ್ಲ. ಪ್ರಾಚೀನ ಪುರಾಣಗಳಲ್ಲಿ ಸಾಯಿಬಾಬಾ ಅವರ ಉಲ್ಲೇಖವಿಲ್ಲ ಎದು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com