ಪ್ರವಾಹ ಪೀಡಿತ ಬಿಹಾರದಲ್ಲಿ ಪರಿಹಾರ ಸಾಮಗ್ರಿಗಳನ್ನು ವಿತರಿಸುವ ವೇಳೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪ್ರವಾಹದ ನೀರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಹೆಲಿಕಾಪ್ಟರ್‌ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ವಾಯುಪಡೆ ಸಿಬ್ಬಂದಿಗಳಿದ್ದು, ಎಲ್ಲರನ್ನೂ ರಕ್ಷಿಸಲಾಗಿದೆ.
ಇಂದು ಮಧ್ಯಾಹ್ನ ಮುಜಾಫರ್‌ಪುರದ ಔರೈ ವಿಭಾಗದ ನಯಾ ಗ್ರಾಮದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ. ಹೆಲಿಕಾಪ್ಟರ್ ದರ್ಭಾಂಗಾ ವಾಯುನೆಲೆಯಿಂದ ಟೇಕಾಫ್ ಆಗಿತ್ತು. ಲ್ಯಾಂಡಿಂಗ್ ನಂತರ, ಹೆಲಿಕಾಪ್ಟರ್ನ ಒಂದು ಭಾಗವು ಪ್ರವಾಹದ ನೀರಿನಲ್ಲಿ ಮುಳುಗಿದೆ. ವಿಪತ್ತು ನಿರ್ವಹಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರತ್ಯಯ ಅಮೃತ್ ಮಾತನಾಡಿ, ಪೈಲಟ್‌ನ ಜಾಣ್ಮೆಯಿಂದ ಭಾರೀ ಅನಾಹುತ ತಪ್ಪಿದೆ ಎಂದರು.
ಇಂಜಿನ್ ವೈಫಲ್ಯದಿಂದಾಗಿ ಪೈಲಟ್ ಹೆಲಿಕಾಪ್ಟರ್ ಆಳವಿಲ್ಲದ ನೀರಿನಲ್ಲಿ ಇಳಿಸಿದ್ದಾರೆ. ಸಿಬ್ಬಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಮೃತ್ ಹೇಳಿದರು. ಅಪಘಾತದ ಬಗ್ಗೆ ಮಾಹಿತಿ ಬಂದ ತಕ್ಷಣ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ ಎಂದು ಅವರು ಹೇಳಿದರು. ಆರಂಭಿಕ ರಕ್ಷಣಾ ಕಾರ್ಯವನ್ನು ಸ್ಥಳೀಯರು ನಡೆಸಿದರು.
Advertisement