
ನವದೆಹಲಿ: ಇಸ್ಲಾಮಿಕ್ ಧರ್ಮದ ಪ್ರಚಾರಕ ಜಾಕಿರ್ ನಾಯಕ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಈ ವಿಷಯದ ಬಗ್ಗೆ ಭಾರತದ ವಿದೇಶಾಂಗ ಸಚಿವ ಪ್ರತಿಕ್ರಿಯೆ ನೀಡಿದೆ. ಜಾಕಿರ್ ನಾಯಕ್ ಗೆ ಪಾಕಿಸ್ತಾನದಲ್ಲಿ ಭವ್ಯ ಸ್ವಾಗತ ನೀಡಿರುವುದರಲ್ಲಿ ಅಚ್ಚರಿಯಿಲ್ಲ ಎಂದು ಎಂಇಎ ಹೇಳಿದೆ.
ವಾರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್, ಜಾಕಿರ್ ನಾಯಕ್ ಪಾಕ್ ಗೆ ಯಾವ ಉದ್ದೇಶದಿಂದ ಭೇಟಿ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಿಲ್ಲ, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರ ಈ ಹಿಂದೆ ನವದೆಹಲಿಗೆ ಭೇಟಿ ನೀಡಿದಾಗ ಜಾಕಿರ್ ನಾಯ್ಕ್ ವಿಚಾರವನ್ನು ಭಾರತ ಪ್ರಸ್ತಾಪಿಸಿತ್ತು ಎಂಬ ಅಂಶವನ್ನು ಉಲ್ಲೇಖಿಸಿದ್ದಾರೆ.
ಜಾಕಿರ್ ನಾಯ್ಕ್ ಅವರ ಪಾಕಿಸ್ತಾನ ಭೇಟಿಯ ಕುರಿತು ಕೇಳಿದ ಪ್ರಶ್ನೆಗೆ ಜೈಸ್ವಾಲ್ ಪ್ರತಿಕ್ರಿಯೆ ನೀಡಿದ್ದು, "ಪಾಕಿಸ್ತಾನದಲ್ಲಿ ಅವರಿಗೆ (ಜಾಕಿರ್ ನಾಯ್ಕ್) ಸನ್ಮಾನ ಮಾಡಲಾಗುತ್ತಿದೆ ಎಂಬ ವರದಿಗಳನ್ನು ನಾವು ನೋಡಿದ್ದೇವೆ. ಅಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಗಿದೆ. ಭಾರತದಿಂದ, ಇಲ್ಲಿನ ಕಾನೂನು, ನ್ಯಾಯದಿಂದ ಪಲಾಯನವಾದ ವ್ಯಕ್ತಿಗೆ ಪಾಕಿಸ್ತಾನದಲ್ಲಿ ಉನ್ನತ ಮಟ್ಟದ ಸ್ವಾಗತ ಸಿಕ್ಕಿರುವುದರ ಬಗ್ಗೆ ನಮಗೆ ಆಶ್ಚರ್ಯವಿಲ್ಲ ಎಂದು ಜೈಸ್ವಾಲ್ ಹೇಳಿದ್ದಾರೆ.
"ಇದು ನಿರಾಶಾದಾಯಕ ಸಂಗತಿಯಾಗಿದೆ, ನಾನು ಖಂಡನೀಯ ಎಂದು ಹೇಳುತ್ತೇನೆ, ಆದರೆ ಅದೇ ಸಮಯದಲ್ಲಿ ನಾನು ಹೇಳಿದಂತೆ, ಇದರಲ್ಲಿ ಆಶ್ಚರ್ಯವೇನಿಲ್ಲ. ಈಗ ಆತ ಅಲ್ಲಿಗೆ ಯಾವ ಪಾಸ್‌ಪೋರ್ಟ್ ಪಡೆದು ಹೋಗಿದ್ದಾರೆ ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿಲ್ಲ, ಮಲೇಷ್ಯಾದ ಪ್ರಧಾನಮಂತ್ರಿ ಇಲ್ಲಿದ್ದಾಗ, ಈ ನಿರ್ದಿಷ್ಟ ಸಮಸ್ಯೆಯನ್ನು ತಿಳಿಸಲಾಗಿದೆ ಎಂದು ನಾನು ನಿಮಗೆ ನೆನಪಿಸುತ್ತೇನೆ, ”ಎಂದು ಜೈಸ್ವಾಲ್ ತಿಳಿಸಿದ್ದಾರೆ.
ಜಾಕಿರ್ ನಾಯಕ್ ವಿವಾದಾತ್ಮಕ ಭಾಷಣಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಪ್ರಸ್ತುತ 2016 ರ ಮನಿ ಲಾಂಡರಿಂಗ್ ಪ್ರಕರಣದ ಅಡಿಯಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಬೇಕಾಗಿದ್ದಾರೆ.
ಅವರು ತಮ್ಮ ದ್ವೇಷದ ಭಾಷಣದಿಂದ ಜನರನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಾಯಕ್ ಪೀಸ್ ಟಿವಿ ಎಂಬ ಹೆಸರಿನ ಚಾನೆಲ್ ನ್ನು ಜಾಕಿರ್ ನಾಯಕ್ ನಡೆಸುತ್ತಿದ್ದಾರೆ. ಜಾಕಿರ್ ನಾಯಕ್ ವಿವಾದಾತ್ಮಕ ನಿಲುವುಗಳಿಂದಾಗಿ ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಾದ್ಯಂತ ಅವರ ಟಿವಿಯನ್ನು ನಿಷೇಧಿಸಲಾಗಿದೆ ಮತ್ತು ಕೆನಡಾ ಮತ್ತು ಯುನೈಟೆಡ್ ಕಿಂಗ್‌ಡಮ್‌ಗೆ ಪ್ರವೇಶವನ್ನು ನಿರಾಕರಿಸಲಾಗಿದೆ.
Advertisement