
ಉತ್ತರಾಖಂಡ್: ಚಾಲಕನ ನಿಯಂತ್ರಣ ತಪ್ಪಿ ಮದುವೆ ದಿಬ್ಬಣದ ಬಸ್ ಕಂದಕಕ್ಕೆ (Plunge) ಉರುಳಿ ಬಿದ್ದ ಪರಿಣಾಮ 30 ಮಂದಿ ಮೃತಪಟ್ಟಿರುವ ಘಟನೆ ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ನಡೆದಿದೆ.
200 ಅಡಿ ಆಳದ ಕಂದಕಕ್ಕೆ ಬಸ್ ಉರುಳಿದ್ದು, ಘಟನೆ ನಡೆದಾಗ ಬಸ್ಸಿನಲ್ಲಿ 50-55 ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಹರಿದ್ವಾರ ಜಿಲ್ಲೆಯ ಲಾಲ್ಧಾಂಗ್‌ನಿಂದ ಪೌರಿಯ ಬಿರೋನ್‌ಖಾಲ್‌ಗೆ ಪ್ರಯಾಣಿಸುತ್ತಿದ್ದರು. ಅಪಘಾತ ನಡೆದ ಸ್ಥಳವು ವಧುವಿನ ಮನೆಯಿಂದ ಎರಡು ಕಿಲೋಮೀಟರ್ ಹಿಂದೆ ಇತ್ತು ಎಂದು ತಿಳಿದುಬಂದಿದೆ.
ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿರುವ ಸ್ಥಳೀಯ ಪೊಲೀಸರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಗಳು ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತದೇಹಗಳನ್ನು ಹೊರತೆಗೆಯುತ್ತಿರುವ ಅಧಿಕಾರಿಗಳು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಂಭವವಿದೆ ಎಂದು ಹೇಳಿದ್ದಾರೆ. ಸ್ಥಳಕ್ಕಾಗಮಿಸಿದ ಸ್ಥಳೀಯ ಶಾಸಕಿ ರಿತು ಖಂಡೂರಿ, ಆಸ್ಪತ್ರೆಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿದರು. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಅಪಘಾತದ ಹಿನ್ನೆಲೆಯಲ್ಲಿ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
Advertisement