
ಛತ್ತರ್‌ಪುರ: ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಸೋಮವಾರ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿದ್ದ ವ್ಯಕ್ಯಿಯೊಬ್ಬ 17 ವರ್ಷದ ಸಂತ್ರಸ್ಥ ಬಾಲಕಿಯ ಮನೆ ಮೇಲೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ಆಕೆಯ ಅಜ್ಜ ಮೃತಪಟ್ಟಿದ್ದಾರೆ ಮತ್ತು ಆಕೆಯ ಚಿಕ್ಕಪ್ಪ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಹರಾ ಗ್ರಾಮದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆಗಮ್ ಜೈನ್ ಅವರು ಹೇಳಿದ್ದಾರೆ.
“ಆರೋಪಿ ಭೋಲಾ ಅಹಿರ್ವಾರ್(24) ಸಂತ್ರಸ್ಥೆಯ ಮೇಲೆ ಗುಂಡು ಹಾರಿಸಿದ್ದು, ಘಟನೆಯಲ್ಲಿ 60 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. 32 ವರ್ಷದ ವ್ಯಕ್ತಿ ಹಾಗೂ 17 ವರ್ಷದ ಬಾಲಕಿ(ಅತ್ಯಾಚಾರ ಸಂತ್ರಸ್ತೆ) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೇಲ್ನೋಟಕ್ಕೆ, ಆರೋಪಿಗಳು ಈ ಹಿಂದೆ ದಾಖಲಾದ(ಅತ್ಯಾಚಾರ) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ ಮಾಡಿಕೊಳ್ಳಲು ಬಯಸಿದ್ದರು ಎಂದು ತೋರುತ್ತದೆ. ಆದರೆ ಇದು ಸಾಧ್ಯವಾಗದಿದ್ದಾಗ ಈ ಘಟನೆ ನಡೆದಿದೆ. ಗುಂಡಿನ ದಾಳಿ ನಡೆಸಿದ ಅಹಿರ್ವಾರ್ ನನ್ನು ಬಂಧಿಸುವ ಯತ್ನಗಳು ನಡೆಯುತ್ತಿವೆ ಎಂದು ಜೈನ್ ಹೇಳಿದ್ದಾರೆ.
ಎರಡು ತಿಂಗಳ ಹಿಂದೆ ಭೋಲಾ ಅಹಿರ್ವಾರ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ, ಅವರು ನಮ್ಮ ಮನೆಗೆ ನುಗ್ಗಿ, ನನ್ನ ಮೇಲೆ, ನನ್ನ ಅಜ್ಜ(ಮೃತ) ಮತ್ತು ಚಿಕ್ಕಪ್ಪನ ಮೇಲೆ ಗುಂಡು ಹಾರಿಸಿದನು" ಎಂದು 17 ವರ್ಷದ ಬಾಲಕಿ ಹೇಳಿದ್ದಾಳೆ.
ಎರಡು ತಿಂಗಳ ಹಿಂದೆ ಹದಿಹರೆಯದ ಬಾಲಕಿಯ ದೂರಿನ ಆಧಾರದ ಮೇಲೆ ಅಹಿರ್ವಾರ್ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಲಾಗಿದೆ ಎಂದು ಸಿವಿಲ್ ಲೈನ್ ಪೊಲೀಸ್ ಠಾಣೆಯ ಉಸ್ತುವಾರಿ ವಾಲ್ಮೀಕಿ ಚೌಬೆ ತಿಳಿಸಿದ್ದಾರೆ.
Advertisement