ನವದೆಹಲಿ: ನಮ್ಮ ದೇಶದ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವಾಯುಪಡೆ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದಾಗಿ ಪ್ರತಿವರ್ಷ ಅಕ್ಟೋಬರ್ 8 ರಂದು ಭಾರತೀಯ ವಾಯುಪಡೆ ದಿನವನ್ನು ಆಚರಿಸಲಾಗುತ್ತದೆ.
ಜಗತ್ತಿನ ನಾಲ್ಕನೇ ಬಲಿಷ್ಠ ಸೇನೆಯಾಗಿರುವ ಭಾರತೀಯ ವಾಯುಪಡೆ ಪ್ರಾರಂಭದಿಂದಲೂ ಅನೇಕ ಯುದ್ಧಗಳಲ್ಲಿ ಭಾಗಿಯಾಗಿದೆ. ಭಾರತವು ಸ್ವಾತಂತ್ರ್ಯ ಪಡೆದ ನಂತರದಲ್ಲಿ ಭಾರತೀಯ ವಾಯುಪಡೆಯು ಪ್ರಮುಖ ಐದು ಯುದ್ಧಗಳಲ್ಲಿ ಭಾಗಿಯಾಗಿದೆ. ಇವುಗಳಲ್ಲಿ ನಾಲ್ಕು ಯುದ್ಧಗಳು ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಿದ್ದರೆ ಒಂದು ಯುದ್ಧವು ಚೀನಾದ ನಡುವೆ ನಡೆದಿತ್ತು.
ಭಾರತೀಯ ವಾಯುಪಡೆ ಅಸ್ತಿತ್ವಕ್ಕೆ ಬಂದದ್ದು ಹೇಗೆ?
ಭಾರತೀಯ ವಾಯುಪಡೆಯನ್ನು ಅಕ್ಟೋಬರ್ 08, 1932 ರಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಸಹಾಯಕ ವಾಯುಪಡೆಯಾಗಿ ಸ್ಥಾಪಿಸಲಾಯಿತು. ಆ ಸಮಯದಲ್ಲಿ ಭಾರತೀಯ ವಾಯುಪಡೆಯನ್ನು ರಾಯಲ್ ಇಂಡಿಯನ್ ಏರ್ ಫೋರ್ಸ್ ಎಂದು ಕರೆಯಲಾಗುತ್ತಿತ್ತು. ಆದರೆ 1950 ರಲ್ಲಿ ಭಾರತದ ಗಣರಾಜ್ಯವಾದ ಬಳಿಕ ಭಾರತದ ವಾಯುಸೇನೆಯ ರಾಯಲ್ ಎಂಬ ಪದವನ್ನು ತೆಗೆದು ಹಾಕಿ ಇಂಡಿಯನ್ ಏರ್ ಫೋರ್ಸ್ ಎಂದು ಕರೆಯಲಾಯಿತು.
1933ರಲ್ಲಿ ಕೇವಲ ಆರು ಅಧಿಕಾರಿಗಳು ಮತ್ತು 19 ಯೋಧರೊಂದಿಗೆ ಪ್ರಾರಂಭವಾದ ಭಾರತೀಯ ವಾಯುಪಡೆಯು ಇಂದು ವಿಶ್ವದ ನಾಲ್ಕನೇ ಪ್ರಬಲ ವಾಯುಸೇನೆಯಾಗಿ ಬೆಳೆದು ನಿಂತಿದೆ.1932 ರಲ್ಲಿ ಭಾರತೀಯ ವಾಯುಸೇನೆಯನ್ನು ಸ್ಥಾಪಿಸಿದ ನೆನಪಿಗಾಗಿ ಮತ್ತು ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶರಕ್ಷಣೆಯಲ್ಲಿ ತೊಡಗಿರುವ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದಾಗಿ ಪ್ರತಿವರ್ಷ ಅಕ್ಟೋಬರ್ 8 ರಂದು ಭಾರತೀಯ ವಾಯುಪಡೆ ದಿನವನ್ನು ಆಚರಿಸಲಾಗುತ್ತದೆ.
ಭಾರತೀಯ ವಾಯುಪಡೆ ದಿನದ ಮಹತ್ವ
ನಮ್ಮ ರಾಷ್ಟ್ರವನ್ನು ರಕ್ಷಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿರುವ ಭಾರತೀಯ ವಾಯುಸೇನೆಯ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಉದ್ದೇಶದಿಂದ ಈ ದಿನವು ಮಹತ್ವವನ್ನು ಪಡೆದುಕೊಂಡಿದೆ. ಈ ದಿನದಂದು ಭಾರತೀಯ ವಾಯುಪಡೆ ದಿನದ ಸ್ಮರಣಾರ್ಥವಾಗಿ ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಯೋಧರನ್ನು ಗೌರವಿಸಲಾಗುತ್ತದೆ. ಅದಲ್ಲದೇ, ನಮ್ಮ ದೇಶದ ಮಿಲಿಟರಿ ಶಕ್ತಿಯ ಪ್ರದರ್ಶನವನ್ನು ಮಾಡುವ ಮುಖೇನವಾಗಿ ನೆರೆಹೊರೆಯ ರಾಷ್ಟ್ರಗಳಿಗೆ ಭಾರತೀಯ ಸೇನೆಯ ಶಕ್ತಿಯನ್ನು ಪ್ರದರ್ಶಿಸಲಾಗುತ್ತದೆ.
ಪ್ರಧಾನಿ ಮೋದಿ ಶುಭಾಶಯ
ನಮ್ಮ ವೀರ ವಾಯು ಯೋಧರಿಗೆ ವಾಯುಪಡೆ ದಿನದ ಶುಭಾಶಯಗಳು. ನಮ್ಮ ವಾಯುಪಡೆಯು ಅವರ ಧೈರ್ಯ ಮತ್ತು ವೃತ್ತಿಪರತೆಗಾಗಿ ಮೆಚ್ಚುಗೆ ಪಡೆದಿದೆ. ನಮ್ಮ ದೇಶವನ್ನು ರಕ್ಷಿಸುವಲ್ಲಿ ವಾಯುಪಡೆ ಯೋಧರ ಪಾತ್ರ ಅತ್ಯಂತ ಶ್ಲಾಘನೀಯವಾಗಿದೆ ಎಂದು ಹೇಳುತ್ತಾರೆ.
Advertisement