
ಚಂಡೀಗಢ: ಹರಿಯಾಣದ ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದೇಶದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರು ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬಿಜೆಪಿಯ ಕುರುಕ್ಷೇತ್ರ ಸಂಸದ ನವೀನ್ ಜಿಂದಾಲ್ ಅವರ ತಾಯಿಯಾಗಿರುವ ಸಾವಿತ್ರಿ ಜಿಂದಾಲ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಾಮ್ ನಿವಾಸ್ ರಾಣಾ ಅವರ ವಿರುದ್ಧ 18,941 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಸಾವಿತ್ರಿ ಜಿಂದಾಲ್ ಅವರು 49,231 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ 30,290 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಹಾಗೂ ನಿರ್ಗಮಿತ ಶಾಸಕ ಕಮಲ್ ಗುಪ್ತಾ ಅವರು ಕೇವಲ 17,385 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಫೋರ್ಬ್ಸ್ ಇಂಡಿಯಾ ಈ ವರ್ಷ, ಸಾವಿತ್ರಿ ಜಿಂದಾಲ್ ಅವರು 29.1 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಆಸ್ತಿ ಹೊಂದಿರುವ ದೇಶದ ಅತ್ಯಂತ ಶ್ರೀಮಂತ ಮಹಿಳೆ ಎಂದು ಪಟ್ಟಿ ಮಾಡಿದೆ.
ಅಕ್ಟೋಬರ್ 5 ರಂದು ನಡೆದ 90 ಸದಸ್ಯ ಬಲದ ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಆಡಳಿತರೂಢ ಬಿಜೆಪಿ ಸತತ ಮೂರನೇ ಬಾರಿಗೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರುತ್ತಿದೆ.
Advertisement