
ಮುಂಬೈ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಮಿತ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್ ಅವರು, ಮಿತ್ರಪಕ್ಷಗಳ ಬೆಂಬಲವಿಲ್ಲದೆ ಗೆಲ್ಲಬಹುದು ಎಂದು ಅತ್ಯಂತ ಹಳೆ ಪಕ್ಷ ನಂಬಿದೆ ಎಂದು ಬುಧವಾರ ಟೀಕಿಸಿದ್ದಾರೆ.
ಸೇನಾ(ಯುಬಿಟಿ) ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ, ಕಾಂಗ್ರೆಸ್ "ಗೆಲುವಿನ ಪಂದ್ಯವನ್ನು ಸೋಲಿನ ಪಂದ್ಯವಾಗಿ ಪರಿವರ್ತಿಸಿದೆ" ಮತ್ತು 'ಕೈ' ಸೋಲಿಗೆ "ಅತಿಯಾದ ಆತ್ಮವಿಶ್ವಾಸ" ಹಾಗೂ ಸ್ಥಳೀಯ ನಾಯಕರ "ಅಹಂಕಾರ" ಕಾರಣ ಎಂದು ರಾವತ್ ಹೇಳಿದ್ದಾರೆ.
ಸಂಪಾದಕೀಯವು, ವಿಶೇಷವಾಗಿ ಹರಿಯಾಣ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಟೀಕಿಸಿದ್ದು, ಅಭ್ಯರ್ಥಿ ಆಯ್ಕೆಯಲ್ಲಿ ಕುಮಾರಿ ಸೆಲ್ಜಾ ಅವರಂತಹ ಪ್ರಮುಖ ವ್ಯಕ್ತಿಗಳನ್ನು ಕಡೆಗಣಿಸಲಾಗಿದೆ ಎಂದು ಹೇಳಿದೆ.
ಆಂತರಿಕ ಭಿನ್ನಾಭಿಪ್ರಾಯವು ಕಾಂಗ್ರೆಸ್‌ನ ಸಂಘಟನಾ ಶಕ್ತಿಯನ್ನು ದುರ್ಬಲಗೊಳಿಸಿತು ಮತ್ತು ಕಳಪೆ ಪ್ರಚಾರ ಸೋಲಿಗೆ ಕಾರಣವಾಯಿತು ಎಂದು ಸಾಮ್ನಾ ಹೇಳಿದೆ.
ಹರಿಯಾಣದಲ್ಲಿ ಬಿಜೆಪಿ ಆಡಳಿತದ ವಿರುದ್ಧ ಅಲೆ ಇದ್ದರೂ, ಕಾಂಗ್ರೆಸ್ ನೆಲಕಚ್ಚಿದೆ. ಬಿಜೆಪಿ ವಿರೋಧಿ ವಾತಾವರಣವನ್ನು ಲಾಭ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಇದಕ್ಕೆ ಪಕ್ಷದ ಆಂತರಿಕ ಕಲಹವು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಸಂಪಾದಕೀಯ ತಿಳಿಸಿದೆ.
ಗೆಲ್ಲುವ ಪಂದ್ಯವನ್ನು ಸೋಲಿನ ಪಂದ್ಯವಾಗಿ ಪರಿವರ್ತಿಸುವುದು ಹೇಗೆ ಎಂಬುದನ್ನು ಕಾಂಗ್ರೆಸ್‌ನಿಂದ ಎಲ್ಲರೂ ಕಲಿಯಬೇಕು ಎಂದು ಸಂಪಾದಕೀಯ ಹೇಳಿದೆ.
ಹರಿಯಾಣದಲ್ಲಿ ಪಕ್ಷದ ಸೋಲಿನಿಂದ ಪಾಠ ಕಲಿಯುವಂತೆ ಸಾಮ್ನಾ ಸಂಪಾದಕೀಯ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದೆ.
ಏತನ್ಮಧ್ಯೆ, ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಕಾಂಗ್ರೆಸ್ ದುರ್ಬಲ ಪ್ರದೇಶಗಳಲ್ಲಿ ಮಿತ್ರಪಕ್ಷಗಳನ್ನು ಅವಲಂಬಿಸಿದೆ. ಆದರೆ ತನ್ನ ಭದ್ರಕೋಟೆಯಲ್ಲಿ ಮಿತ್ರ ಪಕ್ಷಗಳನ್ನು ನಿರ್ಲಕ್ಷಿಸುತ್ತದೆ. "ಕಾಂಗ್ರೆಸ್ ಎಲ್ಲಿ ದುರ್ಬಲವಾಗಿದೆಯೋ ಅಲ್ಲಿ ಅದು ಪ್ರಾದೇಶಿಕ ಪಕ್ಷಗಳ ಸಹಾಯವನ್ನು ಪಡೆಯುತ್ತದೆ, ಆದರೆ ತಾನು ಪ್ರಬಲ ಎಂದು ಭಾವಿಸಿದರೆ, ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳಿಗೆ ಯಾವುದೇ ಪ್ರಾಮುಖ್ಯತೆ ನೀಡುವುದಿಲ್ಲ" ಎಂದು ಆರೋಪಿಸಿದರು.
ಕಾಂಗ್ರೆಸ್ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿದ್ದರೆ ಹರಿಯಾಣದ ಚುನಾವಣಾ ಫಲಿತಾಂಶವೇ ಬೇರೆಯಾಗಿರುತ್ತಿತ್ತು ಎಂದು ರಾವತ್ ಹೇಳಿದ್ದಾರೆ.
Advertisement