ಹರಿಯಾಣ: ಚುನಾಯಿತ 90 ಶಾಸಕರಲ್ಲಿ 86 ಮಂದಿ ಕೋಟ್ಯಾಧಿಪತಿಗಳು; 12 MLA ಗಳ ವಿರುದ್ಧ ಕ್ರಿಮಿನಲ್ ಪ್ರಕರಣ- ADR

2019 ರಲ್ಲಿ ಶೇ, 93 ರಷ್ಟಿದ್ದ ಕೋಟ್ಯಾಧಿಪತಿ ಶಾಸಕರ ಸಂಖ್ಯೆ ಈ ಬಾರಿ ಶೇ. 96 ಕ್ಕೆ ಏರಿಕೆಯಾಗಿದೆ. 90 ಶಾಸಕರ ಪೈಕಿ ಶೇ.44 ಮಂದಿ 10 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿದ್ದರೆ,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಹರ್ಯಾಣ ವಿಧಾನಸಭೆಯಲ್ಲಿ ಹೊಸದಾಗಿ ಚುನಾಯಿತರಾದ 90 ಸದಸ್ಯರ ಪೈಕಿ 86 ಶಾಸಕರು (ಶೇ 96) ಕೋಟ್ಯಾಧಿಪತಿಗಳಾಗಿದ್ದಾರೆ, ಅದರಲ್ಲಿ 12 (ಶೇ. 13) ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಎಡಿಆರ್ ವಿಶ್ಲೇಷಣೆ ಮಾಡಿದೆ.

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಹರಿಯಾಣ ಎಲೆಕ್ಷನ್ ವಾಚ್‌ನ ಎಲ್ಲಾ 90 ವಿಜೇತ ಅಭ್ಯರ್ಥಿಗಳ ಅಫಿಡವಿಟ್‌ಗಳ ವಿಶ್ಲೇಷಣೆಯಲ್ಲಿ ಈ ಮಾಹಿತಿ ತಿಳಿದು ಬಂದಿದೆ. 2019 ರಲ್ಲಿ ಶೇ, 93 ರಷ್ಟಿದ್ದ ಕೋಟ್ಯಾಧಿಪತಿ ಶಾಸಕರ ಸಂಖ್ಯೆ ಈ ಬಾರಿ ಶೇ. 96 ಕ್ಕೆ ಏರಿಕೆಯಾಗಿದೆ. 90 ಶಾಸಕರ ಪೈಕಿ ಶೇ.44 ಮಂದಿ 10 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿದ್ದರೆ, ಶೇ.2.2ರಷ್ಟು ಮಂದಿ ಮಾತ್ರ 20 ಲಕ್ಷಕ್ಕಿಂತ ಕಡಿಮೆ ಆಸ್ತಿ ಹೊಂದಿದ್ದಾರೆ ಎಂದು ಅಂಕಿಅಂಶಗಳು ತೋರಿಸಿವೆ. ಪ್ರತಿ ವಿಜೇತ ಅಭ್ಯರ್ಥಿಯ ಸರಾಸರಿ ಆಸ್ತಿಯು 2019 ರಲ್ಲಿ 18.29 ಕೋಟಿ ರೂಪಾಯಿಗಳಿಂದ 24.97 ಕೋಟಿ ರೂಪಾಯಿಗಳಷ್ಟು ಗಣನೀಯವಾಗಿ ಏರಿಕೆಯಾಗಿದೆ.

ಶೇ. 96 ರಷ್ಟು ಬಿಜೆಪಿ ಶಾಸಕರು, ಶೇ. 95 ರಷ್ಟು ಕಾಂಗ್ರೆಸ್ ಶಾಸಕರು ಮತ್ತು ಶೇ. 100 ರಷ್ಟು ಐಎನ್‌ಎಲ್‌ಡಿ ಮತ್ತು ಸ್ವತಂತ್ರ ವಿಜೇತರು 1 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಘೋಷಿಸಿದ್ದಾರೆ. ಹಿಸಾರ್‌ನ ಸ್ವತಂತ್ರ ಶಾಸಕಿ ಸಾವಿತ್ರಿ ಜಿಂದಾಲ್ ಒಟ್ಟು 270 ಕೋಟಿ ರೂಪಾಯಿ ಆಸ್ತಿಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ, ಬಿಜೆಪಿಯ ಶಕ್ತಿ ರಾಣಿ ಶರ್ಮಾ 145 ಕೋಟಿ ಮತ್ತು ಶ್ರುತಿ ಚೌಧರಿ 134 ಕೋಟಿ ರೂ. ಆಸ್ತಿ ಹೊಂದಿದ್ದಾರೆ.

ಸಾಂದರ್ಭಿಕ ಚಿತ್ರ
ಹರ್ಯಾಣ ಫಲಿತಾಂಶ: ಚುನಾವಣಾ ಆಯೋಗ ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ

2024 ರಲ್ಲಿ ಒಟ್ಟು 30 ಶಾಸಕರು ಮರು ಆಯ್ಕೆಯಾಗಿದ್ದಾರೆ, ಅವರ ಸರಾಸರಿ ಆಸ್ತಿಯು 2019 ರಿಂದ ಶೇ. 59ರಷ್ಟು ಹೆಚ್ಚಾಗಿದೆ. ಕಳೆದ ಐದು ವರ್ಷಗಳಲ್ಲಿ 9.08 ಕೋಟಿಯಿಂದ ಈಗ 14.46 ಕೋಟಿಗೆ ಗಮನಾರ್ಹ ಆರ್ಥಿಕ ಲಾಭ ಕಂಡು ಬಂದಿದೆ.

ವಿಜೇತ ಅಭ್ಯರ್ಥಿಗಳ ಪೈಕಿ 12 ಮಂದಿ ವಿರುದ್ಧ ಕ್ರಿಮಿನಲ್ ದಾಖಲೆಗಳಿವೆ, ಇದರಲ್ಲಿ ಆರು ಮಂದಿ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ, ಒಬ್ಬರು ಕೊಲೆ ಯತ್ನದ ಆರೋಪಿ ಎಂದು ಅಂಕಿಅಂಶಗಳು ತಿಳಿಸಿವೆ. 2019ರಲ್ಲಿ ಏಳು ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು. ಶೇ. 19ರಷ್ಟು ಕಾಂಗ್ರೆಸ್ ಶಾಸಕರು, ಶೇ. 6ರಷ್ಟು ಬಿಜೆಪಿ ಶಾಸಕರು ಶೇ. 67ರಷ್ಟು ಸ್ವತಂತ್ರ ಶಾಸಕರು ತಮ್ಮ ಹೆಸರಿನಲ್ಲಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ.

28 ವಿಜೇತ ಅಭ್ಯರ್ಥಿಗಳು 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಆಸ್ತಿ ಘೋಷಿಸಿದ್ದಾರೆ ಎಂದು ವಿಶ್ಲೇಷಣೆ ತೋರಿಸಿದೆ. ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ, ಶೇ. 68 ವಿಜೇತ ಅಭ್ಯರ್ಥಿಗಳು ಪದವೀಧರರು ಅಥವಾ ಉನ್ನತ ಪದವಿಗಳನ್ನು ಹೊಂದಿದ್ದಾರೆ, ಆದರೆ ಶೇ. 29ರಷ್ಟು ಜನರು 8 ನೇ ತರಗತಿಯಿಂದ 12 ನೇ ತರಗತಿಯವರೆಗೆ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿದ್ದಾರೆ ಎಂದು ವರದಿ ತಿಳಿಸಿದೆ. ಹೊಸ ಸದನದಲ್ಲಿ 14 ಮಹಿಳಾ ಶಾಸಕರಿದ್ದಾರೆ. ಇದು 2019 ರಲ್ಲಿ ಇದ್ದಿದ್ದಕ್ಕಿಂತ ಶೇಕಡಾ 10 ರಷ್ಟು ಹೆಚ್ಚಳವಾಗಿದೆ, ಆದರೆ ಶೇ. 66 ಶಾಸಕರು 51 ರಿಂದ 80 ವರ್ಷ ವಯಸ್ಸಿನವರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com