
ಇಟಾನಗರ: ಹಲವು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ 37 ವರ್ಷದ ವ್ಯಕ್ತಿಯನ್ನು ಅರುಣಾಚಲ ಪ್ರದೇಶದಲ್ಲಿ ಇಟಾನಗರದಲ್ಲಿ ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಇಟಾನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ ಪಶ್ಚಿಮ ಕಮೆಂಗ್ ಜಿಲ್ಲೆಯ ದಿರಾಂಗ್‌ನ ನೂನಾ ಕ್ಯಾಂಪ್ ಗ್ರಾಮದವರಾದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ರಾಜ್‌ಬೀರ್ ಸಿಂಗ್ ತಿಳಿಸಿದ್ದಾರೆ.
ಸೆಪ್ಟೆಂಬರ್ 7 ರಂದು 14 ವರ್ಷದ ಬಾಲಕಿಗೆ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದ. ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ತನ್ನ ಸ್ಕೂಟರ್‌ನಲ್ಲಿ ಲಿಫ್ಟ್ ನೀಡಿದ್ದಾನೆ. ಈ ವೇಳೆ ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಬಾಲಕಿ ಚಲಿಸುತ್ತಿದ್ದ ಬೈಕ್ ನಿಂದ ಜಿಗಿದು ಆತನಿಂದ ತಪ್ಪಿಸಿಕೊಂಡಿರುವುದಾಗಿ ಎಸ್ಪಿ ತಿಳಿಸಿದರು.
ಈ ಸಂಬಂಧ ದೂರು ದಾಖಲಾದ ನಂತರ, ಪೊಲೀಸರು ತನಿಖೆ ನಡೆಸಿದ್ದು, ಇಟಾನಗರದ ಶಾಲಾ ಮತ್ತು ಕಾಲೇಜು ಹುಡುಗಿಯರನ್ನು ಗುರಿಯಾಗಿಸಿಕೊಂಡು ಇದೇ ರೀತಿಯ ಕೃತ್ಯವೆಸಗಿರುವುದಾಗಿ ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಇನ್ನೂ ಏಳು ಮಂದಿಗೆ ಇದೇ ರೀತಿಯ ಕಿರುಕುಳ ನೀಡಿರುವುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಅವರು ತಿಳಿಸಿದರು.
ಆರೋಪಿಯು ನಾಲ್ವರು ಶಾಲಾ ವಿದ್ಯಾರ್ಥಿನಿಯರು ಹಾಗೂ ನಾಲ್ವರು ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯವೆಸಗಿದ್ದು, ತನ್ನ ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ. ಇನ್ನಷ್ಟು ಸಂತ್ರಸ್ತರು ಮುಂದೆ ಬರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement