
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನಾ ಹಿರಿಯ ಬಹುಭಾಷಾ ನಟ ಸಯಾಜಿ ಶಿಂಧೆ ಶುಕ್ರವಾರ ಅಜಿತ್ ಪವಾರ್ ನೇತೃತ್ವದ NCPಗೆ ಸೇರ್ಪಡೆಗೊಂಡಿದ್ದಾರೆ.
ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ಶಿಂಧೆ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಪಕ್ಷದ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಮತ್ತು ರಾಜ್ಯ ಎನ್‌ಸಿಪಿ ಮುಖ್ಯಸ್ಥ ಸುನಿಲ್ ತಟ್ಕರೆ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಟ ಪಕ್ಷದ ಸ್ಟಾರ್ ಪ್ರಚಾರಕರಾಗಲಿದ್ದಾರೆ. ಪಕ್ಷದಲ್ಲಿ ಶಿಂಧೆ ಅವರಿಗೆ ಸೂಕ್ತ ಗೌರವ ನೀಡಲಾಗುವುದು ಎಂದು ಪವಾರ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ 65 ವರ್ಷದ ಶಿಂಧೆ, ಹಲವು ಚಿತ್ರಗಳಲ್ಲಿ ರಾಜಕಾರಣಿಯಾಗಿ ನಟಿಸಿದ್ದೇನೆ. ಅಜಿತ್ ಪವಾರ್ ಅವರ ಕಾರ್ಯಶೈಲಿಯಿಂದ ನಾನು ಪ್ರಭಾವಿತನಾಗಿದ್ದೇನೆ. ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು, ನಾನು ವ್ಯವಸ್ಥೆಯ ಭಾಗವಾಗಬೇಕು" ಎಂದು ಅವರು ಹೇಳಿದರು.
ಪಶ್ಚಿಮ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಜನಿಸಿದ ಶಿಂಧೆ ಮರಾಠಿ ರಂಗಭೂಮಿಯಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. 1999 ರಲ್ಲಿ ತೆರೆಕಂಡ "ಶೂಲ್" ಅವರಿಗೆ ಬಾಲಿವುಡ್‌ನಲ್ಲಿ ಅವರ ದೊಡ್ಡ ಬ್ರೇಕ್ ನೀಡಿತ್ತು. ಅದರಲ್ಲಿ ಅವರು ಖಳನಾಯಕನ ಪಾತ್ರವನ್ನು ನಿರ್ವಹಿಸಿದರು. ಮರಾಠಿ ಮತ್ತು ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳು, ಕನ್ನಡ, ಮಲಯಾಳಂ, ಇಂಗ್ಲಿಷ್, ಗುಜರಾತಿ ಮತ್ತು ಭೋಜ್‌ಪುರಿ ಚಲನಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
Advertisement