
ಕಾನ್ಫುರ: ಸಬರಮತಿ ಎಕ್ಸ್‌ಪ್ರೆಸ್ ಮತ್ತು ಕಾಳಿಂದಿ ಎಕ್ಸ್‌ಪ್ರೆಸ್ ಹಳಿತಪ್ಪಿದ ಘಟನೆಯಲ್ಲಿ ಇದುವರೆಗೆ ಯಾವುದೇ ಭಯೋತ್ಪಾದನೆಯ ಕೃತ್ಯದಂತೆ ಕಂಡುಬಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ರೈಲು ಹಳಿಗಳ ಮೇಲೆ ಕಬ್ಬಿಣ, ಗ್ಯಾಸ್ ಸಿಲಿಂಡರ್, ಅಗ್ನಿಶಾಮಕ ಸಿಲಿಂಡರ್ ಮತ್ತಿತರ ವಸ್ತುಗಳನ್ನು ಇಟ್ಟಿರುವುದು ಕಂಡುಬಂದಿದೆ. ಆದರೆ ಇದುವರೆಗೆ ಯಾವುದೇ ಭಯೋತ್ಪಾದಕರ ಕೃತ್ಯ ಎಂಬಂತೆ ಕಂಡುಬಂದಿಲ್ಲ ಎಂದು ಪೊಲೀಸ್ ಉಪ ಆಯುಕ್ತ (ಪಶ್ಚಿಮ) ರಾಜೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.
ಇದು ವಿಧ್ವಂಸಕ ಪ್ರಯತ್ನ ಎಂದು ಅವರು ಒಪ್ಪಿಕೊಂಡರು. ಆಗಸ್ಟ್ 17 ರಂದು ಅಹಮದಾಬಾದ್‌ಗೆ ಹೋಗುವ ಸಬರಮತಿ ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲಿನ ಇಂಜಿನ್ ಕಾನ್ಪುರದ ಗೋವಿಂದಪುರಿ ನಿಲ್ದಾಣದ ಬಳಿ ಹಳಿಯಲ್ಲಿ ಇರಿಸಲಾದ ವಸ್ತುವಿಗೆ ಡಿಕ್ಕಿ ಹೊಡೆದ ನಂತರ 20 ಬೋಗಿಗಳು ಹಳಿ ತಪ್ಪಿದವು. ಕಾನ್ಪುರ ಮತ್ತು ಭೀಮಸೇನ್ ರೈಲು ನಿಲ್ದಾಣಗಳ ನಡುವೆ ಸಂಭವಿಸಿದ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರಲಿಲ್ಲ.
ಸೆಪ್ಟೆಂಬರ್ 9 ರಂದು ಶಿವರಾಜ್‌ಪುರ ಪ್ರದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಅನ್ನು ಹಳಿಯಲ್ಲಿ ಇಡುವ ಮೂಲಕ ಪ್ರಯಾಗ್‌ರಾಜ್‌ನಿಂದ ಭಿವಾನಿ ಕಡೆಗೆ ಹೋಗುತ್ತಿದ್ದ ಕಾಳಿಂದಿ ಎಕ್ಸ್‌ಪ್ರೆಸ್ ಹಳಿತಪ್ಪಿಸಲು ಪ್ರಯತ್ನಿಸಲಾಗಿತ್ತು. ಆದರೆ ಹಳಿ ಮೇಲಿದ್ದ ಸಿಲಿಂಡರ್ ಗಮನಿಸಿದ ಚಾಲಕ ಎಮರ್ಜೆನ್ಸಿ ಬ್ರೇಕ್ ಹಾಕಿದ್ದಾನೆ. ಆದರೆ ರೈಲು ವೇಗದಲ್ಲಿದ್ದ ಕಾರಣ ತಕ್ಷಣಕ್ಕೆ ನಿಲ್ಲದೇ ಸಿಲಿಂಡರ್‌ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ರೈಲು ಹಳಿ ತಪ್ಪದೇ ಸ್ವಲ್ಪ ದೂರ ಚಲಿಸಿ ನಿಂತಿದೆ. ಘಟನೆ ಬಳಿಕ ಸುಮಾರು 20 ನಿಮಿಷಗಳ ಕಾಲ ರೈಲನ್ನು ನಿಲ್ಲಿಸಲಾಗಿತ್ತು. ನಂತರ ಪ್ರಯಾಣ ಮುಂದುವರಿಸಿತು.
Advertisement