ಕೋಟಾ: ಕೋಟಾ-ಇಟಾವಾ ಎಕ್ಸ್‌ಪ್ರೆಸ್ ರೈಲಿನಿಂದ 22 ವರ್ಷದ ಯುವತಿಯನ್ನು ಅಪಹರಿಸಿ, ಐದು ಗಂಟೆಗಳ ಕಾಲ ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಮೂವರು ವ್ಯಕ್ತಿಗಳು ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಭಾನುವಾರ ಯುವತಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಳ್ಳಲಾಗಿದ್ದು, ಯುವತಿ ಮಧ್ಯಪ್ರದೇಶದ ಭಿಂಡ್‌ನಲ್ಲಿರುವ ತನ್ನ ಚಿಕ್ಕಪ್ಪನ ಮನೆಯಿಂದ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ತನ್ನ ಮಗಳಿಗೆ ನಿದ್ರೆ ಮಾತ್ರೆ ನೀಡಿ, ಪ್ರಜ್ಞೆ ತಪ್ಪಿಸಿ, ಅಕ್ಟೋಬರ್ 12 ರಂದು ರೈಲಿನಿಂದ ಅಪಹರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಯುವತಿ ಉತ್ತರ ಪ್ರದೇಶದ ಇಟಾವಾಗೆ ತೆರಳಲು ಭಿಂಡ್‌ನ ಸೋನಿ ರೈಲು ನಿಲ್ದಾಣಲ್ಲಿ ಕೋಟಾ-ಇಟಾವಾ ಎಕ್ಸ್‌ಪ್ರೆಸ್ ಅನ್ನು ಹತ್ತಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) (ಇಟಾವಾ ಗ್ರಾಮಾಂತರ) ಸತ್ಯಪಾಲ್ ಸಿಂಗ್ ಹೇಳಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬ ರೈಲಿನಲ್ಲಿ ಯುವತಿಯ ವಿಡಿಯೋವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದನು. ಅದಕ್ಕೆ ಯುವತಿ ವಿರೋಧಿಸಿದ್ದಾಳೆ ಮತ್ತು ಕೋಚ್ ಅನ್ನು ಬದಲಾಯಿಸಿದ್ದಾಳೆ.
ಆ ವ್ಯಕ್ತಿ ಅನುಮಾನಾಸ್ಪದವಾಗಿ ಕಾಣುತ್ತಿದ್ದರಿಂದ ಯುವತಿ ಆತನ ಫೋಟೋ ಕ್ಲಿಕ್ಕಿಸಿದ್ದಾಳೆ ಎಂದು ದೂರನ್ನು ಉಲ್ಲೇಖಿಸಿ ಸಿಂಗ್ ಹೇಳಿದ್ದಾರೆ. ಆದರೆ, ಆ ವ್ಯಕ್ತಿ ಆಕೆಯನ್ನು ಕೋಚ್‌ಗೆ ಹಿಂಬಾಲಿಸಿ, ಆಕೆಯನ್ನು ಪ್ರಜ್ಞಾಹೀನಗೊಳಿಸಿ ಅಪಹರಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮಹಿಳೆ ಪ್ರಜ್ಞೆಗೆ ಮರಳಿದ ನಂತರ, ಆಕೆಯ ಮೇಲೆ ಮೂವರು ಅತ್ಯಾಚಾರ ಎಸಗಿದ್ದಾರೆ ಮತ್ತು ಐದು ಗಂಟೆಗಳ ಕಾಲ ಒತ್ತೆಯಾಳಾಗಿರಿಸಿಕೊಂಡಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.
ಆರೋಪಿಗಳು, ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ, ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಉಜ್ಜೈನಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ಆಕೆಯನ್ನು ಬಿಟ್ಟು ಹೋಗಿದ್ದರು ಎಂದು ಅವರು ತಿಳಿಸಿದ್ದಾರೆ.
ಸ್ಥಳೀಯರು ಮಹಿಳೆ ತನ್ನ ಕುಟುಂಬವನ್ನು ಸಂಪರ್ಕಿಸಲು ಸಹಾಯ ಮಾಡಿದರು ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ಕುಟುಂಬದವರ ನೀಡಿದ ದೂರಿನ ಆಧಾರದ ಮೇಲೆ ಸ್ಥಳೀಯ ಬಕೇವರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮುಂದಿನ ತನಿಖೆ ಮತ್ತು ಕ್ರಮಕ್ಕಾಗಿ ಸರ್ಕಾರಿ ರೈಲ್ವೆ ಪೊಲೀಸರಿಗೆ (ಜಿಆರ್‌ಪಿ) ಹಸ್ತಾಂತರಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾ(ಬಿಎನ್‌ಎಸ್) ಸೆಕ್ಷನ್ 70(1) (ಗ್ಯಾಂಗ್ ರೇಪ್) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement