
ಶ್ರೀನಗರ: ಜನರ ಧ್ವನಿಯಾಗುವುದು ತಮ್ಮ ಸರ್ಕಾರದ ಮೊದಲ ಕಾರ್ಯವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ನೂತನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬುಧವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರವು ದೀರ್ಘಕಾಲದವರೆಗೆ ಕೇಂದ್ರಾಡಳಿತ ಪ್ರದೇಶವಾಗಿ ಉಳಿಯುವುದಿಲ್ಲ ಮತ್ತು ಶೀಘ್ರದಲ್ಲೇ ಪೂರ್ಣ ರಾಜ್ಯದ ಸ್ಥಾನಮಾನವನ್ನು ಮರಳಿ ಪಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮ್ಮ ಸರ್ಕಾರವು ಜನರ ಬಗ್ಗೆ ಜವಾಬ್ದಾರಿಯನ್ನು ಹೊಂದಿದೆ ಎಂದು ಒತ್ತಿ ಹೇಳಿದ ಅವರು, "ಜನರ ಸಮಸ್ಯೆಗಳನ್ನು ಪರಿಹರಿಸಲು ನಾವು ಜನಾದೇಶ ಪಡೆದಿದ್ದೇವೆ ಮತ್ತು ಅದನ್ನು ನಾವು ಮೊದಲ ದಿನದಿಂದಲೇ ಮಾಡುವ ಗುರಿಯನ್ನು ಹೊಂದಿದ್ದೇವೆ" ಎಂದು ಹೇಳಿದರು.
ನ್ಯಾಷನಲ್ ಕಾನ್ಫರೆನ್ಸ್ ಮತ್ತು ಅದರ ಸಮ್ಮಿಶ್ರ ಪಾಲುದಾರ ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯದ ವರದಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಓಮರ್ ಅಬ್ದುಲ್ಲಾ, "ಇಲ್ಲ, ಎಲ್ಲವೂ ಸರಿಯಾಗಿದೆ ಎಂದರು.
ಎಲ್ಲವೂ ಸರಿಯಾಗಿಲ್ಲದಿದ್ದರೆ, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ(ಕಾಂಗ್ರೆಸ್ ಅಧ್ಯಕ್ಷ), ರಾಹುಲ್ (ಗಾಂಧಿ) ಮತ್ತು ಇತರ ಹಿರಿಯ ನಾಯಕರು ಇಲ್ಲಿಗೆ ಏಕೆ ಬರುತ್ತಾರೆ ಎಂದು ಪ್ರಶ್ನಿಸಿದರು.
ಇನ್ನು ಒಮರ್ ಅಬ್ದುಲ್ಲಾ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ X ನಲ್ಲಿ ಮೊದಲ ಪೋಸ್ಟ್ ಮಾಡಿದ್ದು, "ನಾನು ರಸ್ತೆಯ ಮೂಲಕ ಚಲಿಸುವಾಗ ಯಾವುದೇ "ಗ್ರೀನ್ ಕಾರಿಡಾರ್" ಅಥವಾ ಝಿರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕರಿಗೆ ಹೇಳಿರುವುದಾಗಿ ತಿಳಿಸಿದ್ದಾರೆ.
ಸಾರ್ವಜನಿಕರ ಅನಾನುಕೂಲತೆಯನ್ನು ಕಡಿಮೆ ಮಾಡಲು ಮತ್ತು ಸೈರನ್‌ಗಳ ಬಳಕೆಯನ್ನು ಕಡಿಮೆ ಮಾಡಲು ನಾನು ಡಿಜಿಗೆ ಸೂಚಿಸಿದ್ದೇನೆ. ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳಿಗೂ ಇದನ್ನು ಅನುಸರಿಸಲು ನಾನು ಹೇಳುತ್ತೇನೆ. ಎಲ್ಲದರಲ್ಲೂ ನಮ್ಮ ನಡವಳಿಕೆ ಜನಸ್ನೇಹಿಯಾಗಿರಬೇಕು. ನಾವು ಜನರ ಸೇವೆ ಮಾಡಲು ಬಂದಿದ್ದೇವೆಯೇ ಹೊರತು ಅವರಿಗೆ ತೊಂದರೆ ಕೊಡಲು ಅಲ್ಲ ಎಂದು ನೂತನ ಸಿಎಂ ಪೋಸ್ಟ್ ಮಾಡಿದ್ದಾರೆ.
ಇದು ಮುಳ್ಳಿನ ಕಿರೀಟವಾಗಿದೆ ಮತ್ತು ಜನರ ಭರವಸೆಗಳನ್ನು ಈಡೇರಿಸಲು ಅಲ್ಲಾ ಅವರಿಗೆ ಸಹಾಯ ಮಾಡಲಿ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಬುಧವಾರ ತಮ್ಮ ಮಗ ಒಮರ್ ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಹೇಳಿದ್ದಾರೆ.
Advertisement