
ನವದೆಹಲಿ: ಗೋಧಿ ಮತ್ತು ಬೇಳೆ ಸೇರಿದಂತೆ ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದ್ದು, ರೈತರ ಕಲ್ಯಾಣಕ್ಕಾಗಿ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಒತ್ತಿ ಹೇಳಿದ್ದಾರೆ.
2025-26 ರ ಮಾರುಕಟ್ಟೆ ಋತುವಿನಲ್ಲಿ ಗೋಧಿ ಮತ್ತು ಬೇಳೆ ಸೇರಿದಂತೆ ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಹೆಚ್ಚಳಕ್ಕೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದ ನಂತರ ಪ್ರಧಾನಿ ಮೋದಿ ಅವರು ರೈತರ ಕಲ್ಯಾಣಕ್ಕಾಗಿ ತಮ್ಮ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಈ ಕ್ರಮವು ದೇಶದ ಆಹಾರ ಉತ್ಪಾದಕರ ಜೀವನವನ್ನು ಸರಾಗಗೊಳಿಸುವ ಉದ್ದೇಶ ಹೊಂದಿದೆ ಎಂದು ಮೋದಿ ಹೇಳಿದ್ದಾರೆ.
ಇಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ, ಕಾಶಿಯಲ್ಲಿ ಮಹತ್ವದ ಮೂಲಸೌಕರ್ಯ ಯೋಜನೆ, ಅತಿ ದೊಡ್ಡ ರೈಲು-ರಸ್ತೆ ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು.
ಕಾಶಿಯ ನಿವಾಸಿಗಳ ಮೂಲಸೌಕರ್ಯ ಹೆಚ್ಚಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದ ಪ್ರಧಾನಿ ಮೋದಿ, ಗಂಗಾನದಿಯ ಮೇಲಿನ ಹೊಸ ಸೇತುವೆಯು ಯಾತ್ರಿಕರು, ಪ್ರವಾಸಿಗರು ಮತ್ತು ಸ್ಥಳೀಯ ಸಮುದಾಯಗಳ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಹೊಸ ಉದ್ಯೋಗ ಹಾಗೂ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.
“ಗಂಗಾ ನದಿಯ ಮೇಲೆ ರೈಲು-ರಸ್ತೆ ಸೇತುವೆ ನಿರ್ಮಾಣಕ್ಕೆ ಅನುಮೋದಿಸಲಾಗಿದೆ. ಇದು ಯಾತ್ರಾರ್ಥಿಗಳು, ಪ್ರವಾಸಿಗರು ಮತ್ತು ಇಲ್ಲಿನ ಜನರಿಗೆ ಉತ್ತಮ ಸಂಪರ್ಕವನ್ನು ಒದಗಿಸುವುದು ಮಾತ್ರವಲ್ಲದೆ ಉದ್ಯೋಗ ಮತ್ತು ವ್ಯಾಪಾರಕ್ಕಾಗಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎಂಎಸ್‌ಪಿ ಹೆಚ್ಚಳ
2025-26 ರ ಮಾರುಕಟ್ಟೆ ಋತುವಿಗಾಗಿ ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(MSP) 130 ರಿಂದ 300 ರೂ.ಗಳ ಹೆಚ್ಚಿಸಲು ಕ್ಯಾಬಿನೆಟ್ ಅನುಮೋದಿಸಿದೆ. ಈ MSP ಪ್ರಮುಖ ರಾಬಿ ಬೆಳೆ ಗೋಧಿ ಬೆಲೆಯನ್ನು ಶೇ. 6.6 ರಷ್ಟು ಹೆಚ್ಚಿಸಿದೆ. ಬಾರ್ಲಿ ಬೆಳೆಗಳ MSP ಗರಿಷ್ಠ ಶೇ. 7 ರಷ್ಟು ಹೆಚ್ಚಾಗಿದೆ.
ಗೋಧಿ ಬೆಳೆಯ ಎಂಎಸ್‌ಪಿಯನ್ನು 150 ರೂ.ಗೆ ಹೆಚ್ಚಿಸಲಾಗಿದ್ದು, ಪ್ರತಿ ಕ್ವಿಂಟಲ್‌ಗೆ 2275 ರೂ.ನಿಂದ 2425 ರೂ. ಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳವು ರೈತರಿಗೆ ಪ್ರಯೋಜನವನ್ನು ನೀಡುತ್ತದೆ. ವಿಶೇಷವಾಗಿ ಗೋಧಿ ಪ್ರಮುಖ ಬೆಳೆಯಾಗಿರುವ ಉತ್ತರ ಭಾರತದ ರೈತರಿಗೆ ಇದರಿಂದ ಪ್ರಯೋಜನವಾಗಲಿದೆ.
ರಾಬಿ ಬೆಳೆಯಾದ ಸಾಸಿವೆ MSP 300 ರೂ.ಗಳಷ್ಟು ಹೆಚ್ಚಾಗಿದೆ. ಈ ಮೂಲಕ ಪ್ರತಿ ಕ್ವಿಂಟಾಲ್‌ಗೆ 5,650 ರೂ.ನಿಂದ 5,950 ರೂ. ಆಗಿದೆ.ಕಡಲೆಯ MSP 210 ರೂ. ಏರಿಕೆ ಕಂಡಿದೆ. ಹೊಸ ದರ ಕ್ವಿಂಟಾಲ್‌ಗೆ 5,650 ರೂ. ಆಗಿದೆ. ಕಡಲೆ ಕಾಳು ಭಾರತದಲ್ಲಿ ಪ್ರಮುಖ ದ್ವಿದಳ ಧಾನ್ಯವಾಗಿದೆ ಮತ್ತು ಇದನ್ನು ದೇಶಾದ್ಯಂತ ವ್ಯಾಪಕವಾಗಿ ಸೇವಿಸಲಾಗುತ್ತದೆ.
Advertisement