
ಗಾಜಿಯಾಬಾದ್: ಕಳೆದ ಎಂಟು ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಬಳಿ ಕೆಲಸ ಮಾಡುತ್ತಿದ್ದ ಕೆಲಸದಾಕೆಯನ್ನು ರೊಟ್ಟಿ ಮಾಡಲು ಬಳಸುವ ಹಿಟ್ಟಿನಲ್ಲಿ ಮೂತ್ರ ಬೆರೆಸಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಶಾಂತಿ ನಗರ ಕಾಲೋನಿಯ ರೀನಾ(32) ಎಂಬ ಕೆಲಸದಾಕೆ ಈ ಕೃತ್ಯ ಎಸಗುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮನೆ ಮಾಲೀಕ ನಿತಿನ್ ಗೌತಮ್ ಅವರ ಪತ್ನಿ ರೂಪಮ್ ಅವರು ತಮ್ಮ ಕುಟುಂಬ ಸದಸ್ಯರು ಲಿವರ್ ಸಮಸ್ಯೆಯಿಂದ ಬಳಲುತ್ತಿರುವುದನ್ನು ಗಮನಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಮನೆ ಕೆಲಸದಾಕೆ ಬಗ್ಗೆ ಅನುಮಾನಗೊಂಡ ಮನೆ ಮಾಲೀಕ ನಿತಿನ್, ಅಡುಗೆಮನೆಯಲ್ಲಿ ಆಕೆಯ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಪ್ರಾರಂಭಿಸಿದ್ದರು. ನಿತಿನ್ ಗೌತಮ್ ಅವರು ತಮ್ಮ ಮೊಬೈಲ್ ಫೋನ್ ಬಳಸಿ ರಹಸ್ಯವಾಗಿ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಅದರಲ್ಲಿ ಕೆಲಸದಾಕೆ ಹಿಟ್ಟಿನಲ್ಲಿ ಮೂತ್ರ ಬೆರೆಸುವುದು ಸೆರೆಯಾಗಿದೆ.
ಕುಟುಂಬದವರು ನೀಡಿದ ದೂರು ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಸೋಮವಾರ ಎಫ್‌ಐಆರ್ ದಾಖಲಿಸಿ, ಮಂಗಳವಾರ ರೀನಾಳನ್ನು ಬಂಧಿಸಿದ್ದಾರೆ.
"ವಿಚಾರಣೆಯ ಸಮಯದಲ್ಲಿ, ಕೆಲಸದಾಕೆ ಆರಂಭದಲ್ಲಿ ಆರೋಪಗಳನ್ನು ನಿರಾಕರಿಸಿದ್ದಾಳೆ. ಆದರೆ, ವಿಡಿಯೋವನ್ನು ತೋರಿಸಿದ ನಂತರ, ಅವಳು ತನ್ನ ಕೃತ್ಯ ಒಪ್ಪಿಕೊಂಡಿದ್ದಾಳೆ. ಮಾಲೀಕರು ಆಗಾಗ್ಗೆ ಸಣ್ಣ ತಪ್ಪುಗಳಿಗೂ ನಿಂದಿಸುತ್ತಿದ್ದರಿಂದ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement