
ಪುಣೆ: ಮುಂದಿನ ತಿಂಗಳು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಒಟ್ಟು 288 ಸ್ಥಾನಗಳ ಪೈಕಿ 200 ಕ್ಷೇತ್ರಗಳಲ್ಲಿ ಮಹಾ ವಿಕಾಸ್ ಅಘಾಡಿ(ಎಂವಿಎ)ಯ ಮೂರು ಮಿತ್ರಪಕ್ಷಗಳು ಈಗಾಗಲೇ ಒಮ್ಮತಕ್ಕೆ ಬಂದಿವೆ ಎಂದು ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಗುರುವಾರ ಹೇಳಿದ್ದಾರೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಯಾಣ ಚುನಾವಣೆಯ ಫಲಿತಾಂಶ, ಬಿಜೆಪಿ ವಿರುದ್ಧ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದು ಮಹಾರಾಷ್ಟ್ರದ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
"ನಾನು ಸೀಟು ಹಂಚಿಕೆ ಚರ್ಚೆಯಲ್ಲಿ ನೇರವಾಗಿ ಭಾಗಿಯಾಗಿಲ್ಲ. (ಎನ್‌ಸಿಪಿ-ಎಸ್‌ಪಿ ರಾಜ್ಯ ಘಟಕದ ಮುಖ್ಯಸ್ಥ) ಜಯಂತ್ ಪಾಟೀಲ್ ಅವರು ಮಾತುಕತೆಯಲ್ಲಿ ನಮ್ಮ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಹಂಚಿಕೊಂಡ ಮಾಹಿತಿಯ ಪ್ರಕಾರ, ಒಟ್ಟು 288 ಸ್ಥಾನಗಳ ಪೈಕಿ 200 ಕ್ಷೇತ್ರಗಳಲ್ಲಿ ಒಮ್ಮತಕ್ಕೆ ಬರಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸತಾರಾ ಜಿಲ್ಲೆಯಲ್ಲಿ ಯಾವ ಯಾವ ಕ್ಷೇತ್ರಗಳಿಗೆ ಎನ್‌ಸಿಪಿ(ಎಸ್‌ಪಿ) ಬೇಡಿಕೆ ಇಡುತ್ತದೆ ಎಂಬ ಪ್ರಶ್ನೆಗೆ, ಸೀಟು ಹಂಚಿಕೆ ಕುರಿತು ಪಾಟೀಲ್ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.
Advertisement