MEA spokesperson Randhir Jaiswal
MEA ವಕ್ತಾರ ರಣಧೀರ್ ಜೈಸ್ವಾಲ್

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ವಿರುದ್ಧ ಕ್ರಮ ಕೈಗೊಳ್ಳದ ಕೆನಡಾ ವಿರುದ್ಧ ಭಾರತ ಟೀಕೆ; ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಆರೋಪ ನಿರಾಕರಣೆ

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸದಸ್ಯರ ಬಗ್ಗೆ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಕೆನಡಾ ಸರ್ಕಾರದೊಂದಿಗೆ ಹಂಚಿಕೊಂಡಿದ್ದು, ಅವರ ಬಂಧನಕ್ಕೆ ಮನವಿ ಮಾಡಿದ್ದೇವೆ.
Published on

ನವದೆಹಲಿ: ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸದಸ್ಯರನ್ನು ಬಂಧಿಸುವಂತೆ ಭಾರತ ಮಾಡಿದ ಮನವಿ ಕುರಿತು ಕ್ರಮ ಕೈಗೊಳ್ಳುವಲ್ಲಿ ಕೆನಡಾ ವಿಫಲವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.

ಹಲವು ಮನವಿಗಳ ಹೊರತಾಗಿ ಕೆನಡಾ ಗ್ಯಾಂಗ್‌ನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಭಾರತದ ಪ್ರಮುಖ ಕಾಳಜಿಯನ್ನು ಬಗೆಹರಿಸಲಿಲ್ಲ. ಇದರ ಹಿಂದೆ ರಾಜಕೀಯ ಉದ್ದೇಶ ಅಡಗಿದೆ ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ತಿರುಗೇಟು ನೀಡಿದ್ದಾರೆ.

ಅಪರಾಧಗಳಿಗೆ ಸಂಬಂಧಿಸಿದ ಅನೇಕರ ತಾತ್ಕಾಲಿಕ ಬಂಧನ ಸೇರಿದಂತೆ ಕೆನಡಾದೊಂದಿಗೆ ಕಳೆದ ದಶಕದಲ್ಲಿ 26 ಹಸ್ತಾಂತರದ ಮನವಿಗಳಿಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸದಸ್ಯರ ಬಗ್ಗೆ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಕೆನಡಾ ಸರ್ಕಾರದೊಂದಿಗೆ ಹಂಚಿಕೊಂಡಿದ್ದು, ಅವರ ಬಂಧನಕ್ಕೆ ಮನವಿ ಮಾಡಿದ್ದೇವೆ. ಇಲ್ಲಿಯವರೆಗೆ ನಮ್ಮ ಮನವಿಗೆ ಕೆನಡಾ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಗ್ಯಾಂಗ್ ಮಾಡಿರುವ ಅಪರಾಧಗಳಿಗೆ RCMP ( ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್) ಈಗ ಭಾರತವನ್ನು ದೂಷಿಸುತ್ತಿರುವುದು ನಿಜವಾಗಿಯೂ ವಿಚಿತ್ರವಾಗಿದೆ ಎಂದು ಅವರು ಹೇಳಿದ್ದಾರೆ.

2023 ರಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರ ಕೈವಾಡವಿದೆ ಎಂದು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಇತ್ತೀಚಿಗೆ ಮಾಡಿರುವ ಆರೋಪಗಳನ್ನು MEA ತಳ್ಳಿಹಾಕಿದೆ.

ಬುಧವಾರ ಒಟ್ಟಾವಾದಲ್ಲಿ ವಿದೇಶಿ ಹಸ್ತಕ್ಷೇಪ ಆಯೋಗದಲ್ಲಿ ಸಾಕ್ಷಿಯಾಗಿ ಕಾಣಿಸಿಕೊಂಡ ಟ್ರೂಡೊ, ಕೆನಡಾ ಪ್ರಬಲ ಸಾಕ್ಷ್ಯ ಹೊಂದಿಲ್ಲ. ಗುಪ್ತಚರ ವರದಿ ಆಧರಿಸಿ ಆರೋಪ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಭಾರತವು ಕೆನಡಾದ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಎಂಬುದಕ್ಕೆ ಸ್ಪಷ್ಟ ಸೂಚನೆಗಳು ಇವೆ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ MEA ಕೆನಡಾ ಆರೋಪಕ್ಕೆ ತಕ್ಕಂತೆ ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಭಾರತ ಮತ್ತು ಭಾರತೀಯ ರಾಜತಾಂತ್ರಿಕರ ವಿರುದ್ಧದ ಗಂಭೀರ ಆರೋಪ ಬೆಂಬಲಿಸುವ ಯಾವುದೇ ಪುರಾವೆಗಳನ್ನು ಕೆನಡಾ ಒದಗಿಸಿಲ್ಲ.

ಈ ನಡವಳಿಕೆಯಿಂದ ಭಾರತ-ಕೆನಡಾ ಸಂಬಂಧಗಳಿಗೆ ಹಾನಿ ಉಂಟು ಮಾಡಿದ ಜವಾಬ್ದಾರಿಯು ಪ್ರಧಾನಿ ಟ್ರುಡೊ ಅವರ ಮೇಲಿದೆ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com