
ನವದೆಹಲಿ: ಹಬ್ಬದ ಸೀಸನ್‌ಗೆ ಮುಂಚಿತವಾಗಿ, ರೈಲ್ವೆ ಸಚಿವಾಲಯವು ಗುರುವಾರ ಸುತ್ತೋಲೆ ಹೊರಡಿಸಿದ್ದು, ನವೆಂಬರ್ 1 ರಿಂದ ಜಾರಿಗೆ ಬರುವಂತೆ, ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ಅವಧಿಯನ್ನು ಅಸ್ತಿತ್ವದಲ್ಲಿರುವ 120 ದಿನಗಳಿಂದ 60 ದಿನಗಳಿಗೆ(ಪ್ರಯಾಣದ ದಿನಾಂಕವನ್ನು ಹೊರತುಪಡಿಸಿ) ಇಳಿಸಲಾಗುವುದು ಎಂದು ಹೇಳಿದೆ.
ಪ್ರಯಾಣಿಕರು ಇನ್ನು ಮುಂದೆ ಮುಂಗಡ ಕಾಯ್ದಿರಿಸುವಿಕೆಯ ಅವಧಿಯ(ARP) ಅಡಿಯಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಲು ನಿರ್ಧರಿಸಿದ ಪ್ರಯಾಣದ ದಿನಾಂಕಕ್ಕಿಂತ ನಾಲ್ಕು ತಿಂಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುವುದಿಲ್ಲ.
ಈ ಮುಂಚೆ 120 ದಿನ ಅಂದರೆ 4 ತಿಂಗಳ ಮೊದಲೇ ಟಿಕೆಟ್ ಬುಕ್ ಮಾಡಿಕೊಳ್ಳುವ ಅವಕಾಶವಿತ್ತು. ಅದನ್ನು ಈಗ ಇಲಾಖೆ ಕಡಿತ ಮಾಡಿ ಆದೇಶ ಹೊರಡಿಸಿದೆ.
ಈ ಸಂಬಂಧ ಎಲ್ಲಾ ವಲಯಗಳ ಎಲ್ಲಾ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಿಗೆ ರೈಲ್ವೆ ಸಚಿವಾಲಯವು ಅಧಿಕೃತ ಸುತ್ತೋಲೆ ಹೊರಡಿಸಿದ್ದು, ನವೆಂಬರ್ 1 ರಿಂದ ಈ ಆದೇಶ ಜಾರಿಗೊಳಿಸುವಂತೆ ಸೂಚಿಸಲಾಗಿದೆ.
ಆದಾಗ್ಯೂ 120 ದಿನಗಳ ಮುಂಗಡ ಕಾಯ್ದಿರಿಸುವಿಕೆ ಅವಧಿ(ಎಆರ್ಪಿ)ಯನ್ನು ಇಳಿಕೆ ಮಾಡಿದ್ದರೂ, ಅಕ್ಟೋಬರ್ 31 ರವರೆಗೆ ಮಾಡಿದ ಎಲ್ಲಾ ಬುಕಿಂಗ್‌ಗಳು ಮಾನ್ಯವಾಗಿರುತ್ತವೆ. ನಿಗದಿತ ದಿನಾಂಕದ ನಂತರ ಎಲ್ಲ ಟಿಕೆಟ್‌ಗಳನ್ನು ರದ್ದು ಮಾಡಲಾಗುತ್ತದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.
“ತಾಜ್ ಎಕ್ಸ್‌ಪ್ರೆಸ್, ಗೋಮತಿ ಎಕ್ಸ್‌ಪ್ರೆಸ್‌ನಂತಹ ಹಗಲಿನಲ್ಲಿ ಸಂಚರಿಸುವ ನಿರ್ದಿಷ್ಟ ಎಕ್ಸ್‌ಪ್ರೆಸ್ ರೈಲುಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಕಾರಣ, ಈ ರೈಲುಗಳಲ್ಲಿ ಮುಂಗಡ ಕಾಯ್ದಿರಿಸುವಿಕೆ ಕಡಿಮೆ ಸಮಯದ ಮಿತಿ ಈಗಾಗಲೇ ಜಾರಿಯಲ್ಲಿದೆ ಎಂದು ಮಂಡಳಿ ತಿಳಿಸಿದೆ.
ಇನ್ನು, ವಿದೇಶಿ ಪ್ರವಾಸಿಗರಾಗಿದ್ದಲ್ಲಿ ಅವರಿಗೆ ಈಗಿರುವ 365 ದಿನಗಳ ಕಾಲಮಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಿದೇಶಿಗರು ವರ್ಷದಲ್ಲಿ ಯಾವುದೇ ದಿನಕ್ಕಾದರೂ ರೈಲ್ವೆ ಟಿಕೆಟ್ ಮುಂಗಡ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ ಎಂದು ರೈಲ್ವೆ ಸಚಿವಾಲಯ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.
Advertisement