ಜಮ್ಮು-ಕಾಶ್ಮೀರ: ಗಂದರ್‌ಬಾಲ್‌ನಲ್ಲಿ ಭಯೋತ್ಪಾದಕರ ದಾಳಿ; ವೈದ್ಯ ಮತ್ತು ಆರು ವಲಸೆ ಕಾರ್ಮಿಕರು ಸಾವು

ಸ್ಥಳೀಯರು ಮತ್ತು ಸ್ಥಳೀಯರಲ್ಲದವರನ್ನು ಒಳಗೊಂಡ ಕಾರ್ಮಿಕರ ಗುಂಪಿನ ಮೇಲೆ ಕನಿಷ್ಠ ಇಬ್ಬರು ಭಯೋತ್ಪಾದಕರು ಗುಂಡು ಹಾರಿಸಿದರು ಎಂದು ನಂಬಲಾಗಿದೆ.
A CRPF vehicle at the site as security forces cordon off the area after a terrorist attack, in Ganderbal district, Jammu & Kashmir on Sunday.
ಗಂದರ್‌ಬಾಲ್ ಜಿಲ್ಲೆಯಲ್ಲಿ ಭಯೋತ್ಪಾದಕ ದಾಳಿಯ ನಂತರ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದಿದ್ದಾರೆ.Photo: PTI
Updated on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸುರಂಗ ನಿರ್ಮಾಣ ಸ್ಥಳಕ್ಕೆ ಭಯೋತ್ಪಾದಕರು ದಾಳಿ ನಡೆಸಿದ್ದು, ಓರ್ವ ವೈದ್ಯ ಮತ್ತು ಆರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಂದೇರ್‌ಬಾಲ್‌ನ ಗುಂಡ್‌ನಲ್ಲಿ ಸುರಂಗ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮತ್ತು ಇತರ ಸಿಬ್ಬಂದಿ ಸಂಜೆ ತಮ್ಮ ಶಿಬಿರಕ್ಕೆ ಹಿಂದಿರುಗಿದಾಗ ಅಪರಿಚಿತ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯರು ಮತ್ತು ಸ್ಥಳೀಯರಲ್ಲದವರನ್ನು ಒಳಗೊಂಡ ಕಾರ್ಮಿಕರ ಗುಂಪಿನ ಮೇಲೆ ಕನಿಷ್ಠ ಇಬ್ಬರು ಭಯೋತ್ಪಾದಕರು ಗುಂಡು ಹಾರಿಸಿದರು ಎಂದು ನಂಬಲಾಗಿದೆ.

ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಒಬ್ಬ ವೈದ್ಯ ಮತ್ತು ಇತರ ನಾಲ್ವರು ಅನಂತರ ಸಾವನ್ನಪ್ಪಿದ್ದಾರೆ. ಐದು ಜನರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ಡಾ.ಶಹನವಾಜ್, ಫಹೀಮ್ ನಜೀರ್, ಕಲೀಂ, ಮೊಹಮ್ಮದ್ ಹನೀಫ್, ಶಶಿ ಅಬ್ರೋಲ್, ಅನಿಲ್ ಶುಕ್ಲಾ ಮತ್ತು ಗುರ್ಮೀತ್ ಸಿಂಗ್ ಎಂದು ಗುರುತಿಸಲಾಗಿದೆ.

ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದಿವೆ ಮತ್ತು ದಾಳಿಕೋರರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅವರು ಹೇಳಿದರು.

ಕಾಶ್ಮೀರದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ), ವಿ ಕೆ ಬಿರ್ಡಿ ಸೇರಿದಂತೆ ಉನ್ನತ ಭದ್ರತಾ ಅಧಿಕಾರಿಗಳು ಪರಿಸ್ಥಿತಿಯನ್ನು ನಿರ್ವಹಿಸಲು ಸ್ಥಳಕ್ಕೆ ತಲುಪಿದ್ದಾರೆ.

X ನಲ್ಲಿನ ಪೋಸ್ಟ್‌ನಲ್ಲಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೋನಾಮಾರ್ಗ್ ಪ್ರದೇಶದ ಗಗಂಗೀರ್ ಪ್ರದೇಶದಲ್ಲಿ ನಡೆದ ಘಟನೆಯನ್ನು ಖಂಡಿಸಿದ್ದಾರೆ.

ಘಟನೆಯಲ್ಲಿ ಸಾವುನೋವಿನ ಸಂಖ್ಯೆ ಹೆಚ್ಚಾಗಬಹುದು ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಹೇಳಿದ್ದಾರೆ.

"ಗಗಂಗಿರ್ ದಾಳಿಯಲ್ಲಿ ಗಾಯಗೊಂಡವರ ಸಂಖ್ಯೆ ಅಂತಿಮವಾಗಿಲ್ಲ, ಏಕೆಂದರೆ ಸ್ಥಳೀಯ ಮತ್ತು ಸ್ಥಳೀಯರಲ್ಲದ ಹಲವಾರು ಕಾರ್ಮಿಕರು ಗಾಯಗೊಂಡಿದ್ದಾರೆ.

ಗಂಭೀರವಾಗಿ ಗಾಯಗೊಂಡವರನ್ನು ಶ್ರೀನಗರದ ಸ್ಕಿಮ್ಸ್‌ಗೆ ಕಳುಹಿಸಲಾಗುತ್ತಿದ್ದು, ಗಾಯಾಳುಗಳು ಸಂಪೂರ್ಣ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಅವರು ಹೇಳಿದರು.

ಶುಕ್ರವಾರ, ಶೋಪಿಯಾನ್ ಜಿಲ್ಲೆಯಲ್ಲಿ ಗುಂಡೇಟುಗಳು ಬಿದ್ದಿದ್ದ ಬಿಹಾರದ ಕಾರ್ಮಿಕನೊಬ್ಬನ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಗರಿಕರ ಮೇಲಿನ ಭೀಕರ ಭಯೋತ್ಪಾದಕ ದಾಳಿಯನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತೀವ್ರವಾಗಿ ಖಂಡಿಸಿದ್ದಾರೆ.

"ಈ ಹೇಯ ಕೃತ್ಯದ ಹಿಂದೆ ಇರುವವರಿಗೆ ತಕ್ಕ ಶಿಕ್ಷೆಯಾಗುತ್ತದೆ ಎಂದು ನಾನು ಜನರಿಗೆ ಭರವಸೆ ನೀಡುತ್ತೇನೆ. ನಾವು J&K ಪೊಲೀಸ್, ಸೇನೆ ಮತ್ತು ಭದ್ರತಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದೇವೆ" ಎಂದು X ನಲ್ಲಿನ ಪೋಸ್ಟ್‌ನಲ್ಲಿ ಸಿನ್ಹಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com