
ಮುಂಬೈ: ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳ ಪೈಕಿ 210 ಕ್ಷೇತ್ರಗಳಲ್ಲಿ ಸ್ಥಾನ ಹಂಚಿಕೆ ವಿಷಯದಲ್ಲಿ ಮಹಾ ವಿಕಾಸ್ ಅಘಾಡಿ ಒಮ್ಮತಕ್ಕೆ ಬಂದಿದೆ. ಇದು "ಮಹತ್ವದ ಸಾಧನೆ" ಎಂದು ಶಿವಸೇನೆ-ಉದ್ಧವ್ ಬಾಳಾಸಾಹೇಬ್ ಠಾಕ್ರೆ ಪಕ್ಷದ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಮಹಾರಾಷ್ಟ್ರವನ್ನು ಲೂಟಿ ಮಾಡುವ ಶಕ್ತಿಗಳ ಸೋಲನ್ನು ಖಚಿತಪಡಿಸುವುದು MVA ಗುರಿಯಾಗಿದೆ ಎಂದು ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಿವಸೇನೆ, ಬಿಜೆಪಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಒಳಗೊಂಡಿರುವ ಆಡಳಿತ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು.
"ನಾವು 210 ಸ್ಥಾನಗಳಲ್ಲಿ ಒಮ್ಮತಕ್ಕೆ ಬಂದಿದ್ದೇವೆ. ಇದು ಗಮನಾರ್ಹ ಸಾಧನೆಯಾಗಿದೆ. ನಾವು ಜಂಟಿ ಶಕ್ತಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಗುರಿ ಹೊಂದಿದ್ದೇವೆ ಮತ್ತು ಮಹಾರಾಷ್ಟ್ರವನ್ನು ಲೂಟಿ ಮಾಡುವ ಶಕ್ತಿಗಳನ್ನು ನಾವು ಸೋಲಿಸುತ್ತೇವೆ" ಎಂದು ರಾವತ್, ಹೇಳಿದ್ದಾರೆ.
MVA ಶಿವಸೇನೆ-ಉದ್ಧವ್ ಠಾಕ್ರೆ ಬಣ, ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ NCP-SP ನ್ನು ಒಳಗೊಂಡಿದೆ. ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ ಎಂವಿಎಯಿಂದ ಹೊರಬಂದು ಎಲ್ಲಾ 288 ಸ್ಥಾನಗಳಲ್ಲಿ ಸ್ವಂತವಾಗಿ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂಬ ಸುದ್ದಿ ವಾಹಿನಿಗಳ ವರದಿಗಳ ನಡುವೆ ರಾವುತ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಕಳೆದ ಕೆಲವು ದಿನಗಳಲ್ಲಿ ಸ್ಥಾನ ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಲು ಮೂರು ಪ್ರಮುಖ ವಿರೋಧ ಪಕ್ಷಗಳ ನಡುವೆ ತೀವ್ರವಾದ ಮಾತುಕತೆಗಳು ನಡೆದಿವೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ಕಾಂಗ್ರೆಸ್ ಮತ್ತು ಶಿವಸೇನೆ-ಯುಬಿಟಿ ಸಮಾನ ಮನಸ್ಸಿನಲ್ಲಿಲ್ಲ ಎಂಬ ಊಹಾಪೋಹಗಳಿತ್ತು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೂರವಾಣಿ ಸಂಪರ್ಕ ಹೊಂದಿದ್ದಾರೆ ಎಂಬ ಊಹಾಪೋಹಗಳ ಮಧ್ಯೆ ರಾವತ್ ಅವರ ಹೇಳಿಕೆ ಗಮನಾರ್ಹವಾಗಿದೆ. ಮಿತ್ರಪಕ್ಷಗಳಾಗಿದ್ದ ಶಿವಸೇನೆ-ಯುಬಿಟಿ ಮತ್ತು ಬಿಜೆಪಿ ಮತ್ತೆ ಒಟ್ಟಾಗುವ ಬಗ್ಗೆ ಇತ್ತೀಚೆಗೆ ವದಂತಿಗಳು ಹಬ್ಬಿದ್ದವು.
Advertisement