ಮುಂಬೈ: ಸಾಮಾನ್ಯ ಜನರ ಧ್ವನಿಯನ್ನು ಕೃತಕ ಬುದ್ಧಿಮತ್ತೆ ಮೂಲಕ ನಕಲು ಮಾಡಿ ವಂಚಿಸುತ್ತಿದ್ದ ಸ್ಕ್ಯಾಮರ್ ಗಳು ಈಗ ಬಿಲಿಯನೇರ್ ಗಳ ಧ್ವನಿಯನ್ನೂ ನಕಲಿ ಮಾಡಲು ಮುಂದಾಗಿದ್ದಾರೆ.
ದೂರಸಂಪರ್ಕ ಕ್ಷೇತ್ರದ ಉದ್ಯಮಿ ಸುನಿಲ್ ಭಾರ್ತಿ ಮಿತ್ತಲ್ ಅವರ ಧ್ವನಿಯನ್ನೂ ನಕಲು ಮಾಡಿ, ಮಿತ್ತಲ್ ಅವರ ಅಧಿಕಾರಿ ಬಳಿ ಬೃಹತ್ ಮೊತ್ತವನ್ನು ಕೇಳಿ ಸ್ಕ್ಯಾಮರ್ ಗಳು ವಂಚನೆ ಮಾಡಲು ಯತ್ನಿಸಿರುವ ಘಟನೆ ವರದಿಯಾಗಿದೆ.
ಅದೃಷ್ಟವಶಾತ್, ಮಿತ್ತಲ್ ಅವರು ಅಂತಹ ದೊಡ್ಡ ಹಣ ವರ್ಗಾವಣೆಯನ್ನು ಕೇಳುವುದಿಲ್ಲ ಎಂದು ಅರಿತುಕೊಂಡ ಕಾರ್ಯನಿರ್ವಾಹಕರು ಸಂಭವಿಸಬಹುದಾಗಿದ್ದ ನಷ್ಟವನ್ನು ತಡೆದಿದ್ದಾರೆ.
ಸೋಮವಾರ, ಎನ್‌ಡಿಟಿವಿ ವಿಶ್ವ ಶೃಂಗಸಭೆಯಲ್ಲಿ ಮಾತನಾಡಿದ ಮಿತ್ತಲ್, ಎಐನಂತಹ ಉದಯೋನ್ಮುಖ ತಂತ್ರಜ್ಞಾನಗಳ ದುರುಪಯೋಗದಿಂದ ಉಂಟಾಗುವ ಅಪಾಯಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಲು ಈ ಘಟನೆಯನ್ನು ಉಲ್ಲೇಖಿಸಿದ್ದಾರೆ.
ದುಬೈನಲ್ಲಿ ನೆಲೆಸಿರುವ ಕಾರ್ಯನಿರ್ವಾಹಕರು ತಮ್ಮ ಧ್ವನಿ ಮತ್ತು ಧ್ವನಿಯನ್ನು ಅನುಕರಿಸುವ ಮೋಸದ ಕರೆಯನ್ನು ಸ್ವೀಕರಿಸಿದ್ದ ವಿವರಗಳನ್ನು ಹಂಚಿಕೊಂಡಿರುವ ಮಿತ್ತಲ್, ವಂಚಕರು ತಮ್ಮ ಅಧಿಕಾರಿಗೆ ದೊಡ್ಡ ಪ್ರಮಾಣದ ಹಣವನ್ನು ವರ್ಗಾವಣೆ ಮಾಡುವಂತೆ ನಿರ್ದೇಶಿಸಿದ್ದರು ಎಂದು ಹೇಳಿದ್ದಾರೆ.
ಜಾಗರೂಕರಾಗಿದ್ದ ಮತ್ತು "ಸಂವೇದನಾಶೀಲ" ಅಧಿಕಾರಿ ತಕ್ಷಣವೇ ಇದು ಹಗರಣ ಎಂದು ಅರಿತುಕೊಂಡರು. ಬಳಿಕ ಮಿತ್ತಲ್ ಅವರು ಸ್ವತಃ ಈ ಕರೆಯ ರೆಕಾರ್ಡ್ ಕೇಳಿದಾಗ, ಅಲ್ಲಿರುವ ಧ್ವನಿ ತಾವು ಮಾತನಾಡಿದಂತೆಯೇ ಇದ್ದದ್ದನ್ನು ಕೇಳಿ ಅವರು ಸಂಪೂರ್ಣ ಸ್ತಬ್ಧರಾದಗಿದ್ದರಂತೆ!
"ಭವಿಷ್ಯದಲ್ಲಿ ತಂತ್ರಜ್ಞಾನದ ದುರುಪಯೋಗದಲ್ಲಿ ವಂಚಕರು ಒಂದು ಹೆಜ್ಜೆ ಮುಂದೆ ಹೋಗಲು ಮತ್ತು ಡಿಜಿಟಲ್ ಸಹಿಗಳನ್ನು ದುರುಪಯೋಗಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ, ಅಂತಹ ಕೃತ್ಯಗಳನ್ನು ಮಾಡಲು ಜೂಮ್ ಕರೆಗಳಲ್ಲಿ ಮುಖಗಳನ್ನು ರಿಕ್ರಿಯೇಟ್ ಮಾಡಬಹುದು ಎಂದು ಮಿತ್ತಲ್ ಎಚ್ಚರಿಸಿದ್ದಾರೆ.
Advertisement