
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಡಾನಾ ಚಂಡಮಾರುತದಿಂದ ಮತ್ತಿಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂದನ್ ದಾಸ್ (31ವ) ಎಂಬ ನಾಗರಿಕ ಸ್ವಯಂಸೇವಕ, ಪುರ್ಬಾ ಬರ್ಧಮಾನ್ ಜಿಲ್ಲೆಯ ಬಡ್ ಬಡ್‌ನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ಪೊಲೀಸ್ ತಂಡದೊಂದಿಗೆ ಹೊರಹೋಗಿದ್ದ ವೇಳೆ ದುರ್ಘಟನೆ ನಡೆದಿದೆ.
ತಂತಿಪಾರಾದಲ್ಲಿ ಜಲಾವೃತ ರಸ್ತೆಯಲ್ಲಿ ಹೌರಾ ಮುನ್ಸಿಪಲ್ ಕಾರ್ಪೊರೇಶನ್‌ನ ಉದ್ಯೋಗಿಯೊಬ್ಬರ ಶವ ಪತ್ತೆಯಾಗಿದೆ. ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ನಿನ್ನೆ ರಾಜ್ಯದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಮೃತಪಟ್ಟಿದ್ದರು. ದಕ್ಷಿಣ 24 ಪರಗಣ ಜಿಲ್ಲೆಯ ಪಥರ್‌ಪ್ರತಿಮಾದಲ್ಲಿ ಒಬ್ಬರು ಮೃತಪಟ್ಟರೆ, ಮತ್ತೊಬ್ಬರು ದಕ್ಷಿಣ ಕೋಲ್ಕತ್ತಾದ ಭಬಾನಿಪುರ ಪ್ರದೇಶದಲ್ಲಿ ಮೃತಪಟ್ಟಿದ್ದಾರೆ.
ಡಾನಾ ಚಂಡಮಾರುತ ನಿನ್ನೆ ಮುಂಜಾನೆ ಪೂರ್ವ ಕರಾವಳಿಗೆ ಅಪ್ಪಳಿಸಿತು, ಧಾರಾಕಾರ ಮಳೆ ಮತ್ತು ಹೆಚ್ಚಿನ ವೇಗದಲ್ಲಿ ಗಾಳಿ ಬೀಸಿ ಮರಗಳು ಮತ್ತು ವಿದ್ಯುತ್ ಕಂಬಗಳನ್ನು ಕಿತ್ತುಹಾಕಿತು. ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ನಾಗರಿಕರ ಮೂಲಸೌಕರ್ಯಗಳು ಮತ್ತು ಬೆಳೆಗಳಿಗೆ ಹಾನಿಯುಂಟಾಗಿವೆ.
Advertisement