
ತೆಲಂಗಾಣ: ಕಣ್ಣು ಕಾಣಿಸದ ವೃದ್ಧ ದಂಪತಿ ತಮ್ಮ ಮಗ ಸಾವನ್ನಪ್ಪಿ 4 ದಿನಗಳು ಕಳೆದರೂ ಅದು ತಿಳಿಯದೇ ಶವದೊಂದಿಗೆ ಜೀವಿಸಿದ್ದ ಘಟನೆ ತೆಲಂಗಾಣದಲ್ಲಿ ನಡೆದಿದೆ.
30 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ವೃದ್ಧ ದಂಪತಿಯನ್ನು ರಕ್ಷಿಸಲಾಗಿದೆ. ಮನೆಯಿಂದ ಅಸಹಜ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ನೆರೆಯ ಮನೆಯವರು ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ 30 ವರ್ಷದ ವ್ಯಕ್ತಿಯ ಮೃತದೇಹ ಹಾಗೂ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ವೃದ್ಧ ಅಂಧ ದಂಪತಿ ಕಾಣಿಸಿದ್ದಾರೆ.
ಮನೆಯಲ್ಲಿ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ನಾಲ್ಕೈದು ದಿನಗಳ ಹಿಂದೆ ನಿದ್ರೆಯಲ್ಲಿಯೇ ಸಾವನ್ನಪ್ಪಿರುವ ಶಂಕೆ ಇದೆ ಎಂದು ನಾಗೋಲ್ ಪೊಲೀಸ್ ಠಾಣೆ ಎಸ್‌ಎಚ್‌ಒ ಸೂರ್ಯ ನಾಯಕ್ ಪ್ರಾಥಮಿಕ ತನಿಖೆಯಿಂದ ತಿಳಿಸಿದ್ದಾರೆ.
ದೃಷ್ಟಿ ಇರದ, 60 ವರ್ಷಕ್ಕಿಂತ ಮೇಲ್ಪಟ್ಟ ದಂಪತಿಗೆ ತಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ತಿಳಿದಿರಲಿಲ್ಲ ಮತ್ತು ಅವರು ಆಹಾರ ಮತ್ತು ನೀರಿಗಾಗಿ ಆತನನ್ನು ಕರೆಯಲು ಪ್ರಯ್ನಿಸುತ್ತಿದ್ದರು ಆದರೆ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಅವರ ದುರ್ಬಲ ಧ್ವನಿಯಿಂದಾಗಿ, ನೆರೆಹೊರೆಯವರಿಗೂ ದಂಪತಿಯ ಧ್ವನಿ ಕೇಳುತ್ತಿರಲಿಲ್ಲ ಎಂದು ತೋರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವೃದ್ಧ ದಂಪತಿಗೆ ಪೋಲೀಸರು ಊಟ, ನೀರು ಕೊಡಿಸಿದ್ದಾರೆ. ನಗರದ ಮತ್ತೊಂದು ಪ್ರದೇಶದಲ್ಲಿ ವಾಸಿಸುತ್ತಿರುವ ತಮ್ಮ ಹಿರಿಯ ಮಗನ ಬಗ್ಗೆ ದಂಪತಿಯಿಂದ ಮಾಹಿತಿ ಪಡೆದ ನಂತರ ಪೊಲೀಸರು ಅವರಿಗೆ ಮಾಹಿತಿ ನೀಡಿದ್ದಾರೆ. ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಲಾಗಿದೆ.
Advertisement