ನವದೆಹಲಿ: ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಅಡಿಯಲ್ಲಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ನಾಗರಿಕರಿಗೆ ಆರೋಗ್ಯ ರಕ್ಷಣೆಯನ್ನು ನೀಡುವ ಸರ್ಕಾರದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಲಿದ್ದಾರೆ.
ವಾಡಿಕೆಯ ಪ್ರತಿರಕ್ಷಣೆಗಳ ವಿದ್ಯುನ್ಮಾನ ನೋಂದಾವಣೆಯನ್ನು ನಿರ್ವಹಿಸಲು ಅಭಿವೃದ್ಧಿಪಡಿಸಿದ U-WIN ಪೋರ್ಟಲ್, ಪ್ರಸ್ತುತ ಪ್ರಾಯೋಗಿಕ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಅದನ್ನು ಸಹ ಇಂದು ಪ್ರಧಾನ ಮಂತ್ರಿಗಳು ಉದ್ಘಾಟಿಸಲಿದ್ದಾರೆ. ಇವೆರಡನ್ನು ಹೊರತುಪಡಿಸಿ, ಇನ್ನೂ ಕೆಲವು ಯೋಜನೆಗಳನ್ನು ಪ್ರಧಾನ ಮಂತ್ರಿಗಳು ಉದ್ಘಾಟಿಸಲಿದ್ದಾರೆ.
ಕೋವಿಡ್ ಲಸಿಕೆ ನಿರ್ವಹಣಾ ವ್ಯವಸ್ಥೆಯ Co-WIN ನ ಪ್ರತಿರೂಪವಾಗಿರುವ U-Win ಪ್ಲಾಟ್‌ಫಾರ್ಮ್ ನ್ನು ಗರ್ಭಿಣಿಯರು ಮತ್ತು ಜನನದಿಂದ 17 ವರ್ಷದೊಳಗಿನ ಮಕ್ಕಳ ವ್ಯಾಕ್ಸಿನೇಷನ್‌ನ ಶಾಶ್ವತ ಡಿಜಿಟಲ್ ದಾಖಲೆಯನ್ನು ಇರಿಸಿಕೊಳ್ಳಲು ಅಭಿವೃದ್ಧಿಪಡಿಸಲಾಗಿದೆ.
70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಡಿ ವಿಸ್ತೃತ ಯೋಜನೆ ಇದಾಗಿದ್ದು, ಸುಮಾರು 4.5 ಕೋಟಿ ಕುಟುಂಬಗಳ ಅಂದಾಜು ಆರು ಕೋಟಿ ನಾಗರಿಕರಿಗೆ ಪ್ರಯೋಜನ ಸಿಗಲಿದೆ. ಬಡವರು, ಮಧ್ಯಮ ವರ್ಗದವರು, ಮೇಲ್ಮಧ್ಯಮ ವರ್ಗದವರು ಅಥವಾ ಶ್ರೀಮಂತರು ಯಾವುದೇ ವರ್ಗದವರಾಗಿರಲಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿಯೊಬ್ಬ ವ್ಯಕ್ತಿಯೂ ಆಯುಷ್ಮಾನ್ ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ. ವಿಸ್ತೃತ ಯೋಜನೆ ಪಡೆದ ನಂತರ ಯಾವುದೇ AB PMJAY ಎಂಪನೆಲ್ಡ್ ಆಸ್ಪತ್ರೆಗಳಲ್ಲಿ 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯುತ್ತಾರೆ.
ಸೆಪ್ಟೆಂಬರ್ 1, 2024 ರವರೆಗೆ, 12,696 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 29,648 ಆಸ್ಪತ್ರೆಗಳನ್ನು PMJAY ಅಡಿಯಲ್ಲಿ ಸೇರಿಸಲಾಗಿದೆ.
ಪ್ರಸ್ತುತ ದೆಹಲಿ, ಒಡಿಶಾ ಮತ್ತು ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಆಧಾರ್ ಕಾರ್ಡ್‌ನ ಪ್ರಕಾರ 70 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾರಾದರೂ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಮೂಲಗಳು ತಿಳಿಸಿವೆ. ಇದು ಅಪ್ಲಿಕೇಶನ್ ಆಧಾರಿತ ಯೋಜನೆಯಾಗಿದ್ದು, ಜನರು PMJAY ಪೋರ್ಟಲ್‌ನಲ್ಲಿ ಅಥವಾ ಆಯುಷ್ಮಾನ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈಗಾಗಲೇ ಆಯುಷ್ಮಾನ್ ಕಾರ್ಡ್ ಹೊಂದಿರುವವರು ಮತ್ತೆ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಅವರ eKYC ನ್ನು ಮತ್ತೆ ಪೂರ್ಣಗೊಳಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ AB PM-JAY ವ್ಯಾಪ್ತಿಗೆ ಒಳಪಡುವ ಕುಟುಂಬಗಳಿಗೆ ಸೇರಿದ 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ವರ್ಷಕ್ಕೆ 5 ಲಕ್ಷದವರೆಗೆ ಹೆಚ್ಚುವರಿ ಟಾಪ್-ಅಪ್ ಕವರ್ ನ್ನು ಪಡೆಯುತ್ತಾರೆ. 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರು ಕುಟುಂಬದ ಆಧಾರದ ಮೇಲೆ ವರ್ಷಕ್ಕೆ ರೂ 5 ಲಕ್ಷದವರೆಗೆ ರಕ್ಷಣೆಯನ್ನು ಪಡೆಯುತ್ತಾರೆ.
ಖಾಸಗಿ ಆರೋಗ್ಯ ವಿಮಾ ಪಾಲಿಸಿಗಳು ಅಥವಾ ಉದ್ಯೋಗಿಗಳ ರಾಜ್ಯ ವಿಮಾ ಯೋಜನೆಯಡಿಯಲ್ಲಿರುವ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಅಧಿಕಾರಿಗಳು ಮೊದಲೇ ತಿಳಿಸಿದ್ದರು.
Advertisement