
ಮುಂಬೈ: ಆರು ತಿಂಗಳ ಹಿಂದೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮಾಡಿದ ಭಾಷಣವನ್ನು ಉಲ್ಲೇಖಿಸಿ ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರು ಮಂಗಳವಾರ ಬಾರಾಮತಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು.
ಮತದಾನ ಮಾಡುವಾಗ ಭಾವೋದ್ವೇಗಕ್ಕೆ ಒಳಗಾಗಬೇಡಿ ಎಂದು ಮತದಾರರನ್ನು ಒತ್ತಾಯಿಸಿದ ಅವರು, ಮುಂಬರುವ ಚುನಾವಣೆಯು ಯಾವುದೇ ವ್ಯಕ್ತಿಯ ವಿರುದ್ಧವಲ್ಲ. ಬದಲಿಗೆ ನಿರ್ದಿಷ್ಟ ಸಿದ್ಧಾಂತ ಮತ್ತು ತತ್ವದ ವಿರುದ್ಧವಾಗಿದೆ ಎಂದು ಹೇಳಿದರು.
84 ವರ್ಷದ ಶರದ್ ಪವಾರ್ ಅವರು ಇಂದು ಬಾರಾಮತಿ ವಿಧಾನಸಭಾ ಕ್ಷೇತ್ರದಲ್ಲಿ ಅಜಿತ್ ಪವಾರ್ ವಿರುದ್ಧ ಸ್ಪರ್ಧಿಸಿರುವ ತಮ್ಮ ಮೊಮ್ಮಗ ಯುಗೇಂದ್ರ ಪವಾರ್ ಅವರ ಪರ ಪ್ರಚಾರ ಮಾಡಿದರು.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಜಿತ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ವಿರುದ್ಧ ಸ್ಪರ್ಧಿಸಿದಾಗ ಅಜಿತ್ ಪವಾರ್ ಮಾಡಿದ ಭಾಷಣವನ್ನು ಶರದ್ ಪವಾರ್ ಅವರು ಇಂದು ಪ್ರೇಕ್ಷಕರಿಗೆ ನೆನಪಿಸಿದರು.
ಶರದ್ ಪವಾರ್ ಅವರು ಬಾರಾಮತಿಗೆ ಬಂದು ನಿಮ್ಮನ್ನು ಭಾವುಕರನ್ನಾಗಿಸಲು ಪ್ರಯತ್ನಿಸುತ್ತಾರೆ. ಅವರು ನಿಮ್ಮ ಕಣ್ಣಲ್ಲಿ ನೀರು ತರಿಸುತ್ತಾರೆ ಮತ್ತು ಸುಪ್ರಿಯಾ ಸುಳೆಗೆ ಮತ ಹಾಕುವಂತೆ ಮನವಿ ಮಾಡುತ್ತಾರೆ. ಆದರೆ ಮತದಾನ ಮಾಡುವಾಗ ಭಾವೋದ್ವೇಗಕ್ಕೆ ಒಳಗಾಗಬೇಡಿ ಎಂದು ಅಜಿತ ಪವಾರ್ ಅವರು ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಹೇಳಿದ್ದರು.
ಅಜಿತ್ ಪವಾರ್ ಅವರ ಭಾವನಾತ್ಮಕ ವಾಕ್ಚಾತುರ್ಯವನ್ನು ಅನುಕರಿಸಿದ ಶರದ್ ಪವಾರ್ ಅವರು, ನಾಟಕೀಯವಾಗಿ ಕರವಸ್ತ್ರವನ್ನು ಹೊರತೆಗೆದು, ತಮ್ಮ ಕನ್ನಡಕವನ್ನು ತೆಗೆದುಹಾಕಿ, ತಮ್ಮ ಸಹೋದರನ ಪುತ್ರನಂತೆ ಕಣ್ಣೀರಿನ ಕಣ್ಣುಗಳನ್ನು ಒರೆಸುವಂತೆ ನಟಿಸಿದರು.
ಈ ವೇಳೆ "ಮಹಾರಾಷ್ಟ್ರದಲ್ಲಿ ಒಂದೇ ಧ್ವನಿ ಇದೆ, ಅದು ಶರದ್ ಪವಾರ್" ಎಂದು ಪ್ರೇಕ್ಷಕರು ಉತ್ಸಾಹದಿಂದ ಚಪ್ಪಾಳೆ ತಟ್ಟುವ ಮೂಲಕ ಶರದ್ ಪವಾರ್ ಅವರ ಭಾಷಣಕ್ಕೆ ಪ್ರತಿಕ್ರಿಯಿಸಿದರು.
ಶರದ್ ಪವಾರ್ ಅವರು ಈ ಚುನಾವಣೆಯು ಭಾವನೆಗಳ ವಿರುದ್ಧ ಅಲ್ಲ. ಸಿದ್ಧಾಂತದ ವಿರುದ್ಧ ಎಂದು ಹೇಳಿದರು. “ನಾವು ಶಾಹು ಮಹಾರಾಜ್, ಜ್ಯೋತಿಬಾ ಫುಲೆ, ಅಂಬೇಡ್ಕರ್, ಮಹಾತ್ಮ ಗಾಂಧಿ, ಪಂಡಿತ್ ನೆಹರು ಮತ್ತು ಯಶವಂತರಾವ್ ಚವಾಣ್ ಅವರ ಸಿದ್ಧಾಂತ ಮತ್ತು ಚಿಂತನೆಗಳನ್ನು ಸ್ವೀಕರಿಸಿದ್ದೇವೆ. ಈ ಮಹಾನ್ ನಾಯಕರು ಮತ್ತು ಚಿಂತಕರು ಹಾಕಿಕೊಟ್ಟ ಮಾರ್ಗದಲ್ಲಿ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ. ನಾವು ನಮ್ಮ ಹಾದಿಯಿಂದ ವಿಮುಖರಾಗುವುದಿಲ್ಲ” ಎಂದರು.
Advertisement