
ನವದೆಹಲಿ: ವಿಮಾನಗಳಿಗೆ ಸರಣಿ ಹುಸಿ ಬಾಂಬ್ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ(ಬಿಸಿಎಎಸ್), ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನ ಗುಪ್ತನಾಮ ಅಥವಾ ಅನಾಮಧೇಯ ಸ್ವರೂಪ, ಭೌಗೋಳಿಕ ರಾಜಕೀಯ ವಿಶ್ಲೇಷಣೆ ಮತ್ತು ಆನ್‌ಬೋರ್ಡ್ ವಿಐಪಿಗಳ ಭದ್ರತೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
"ಹೆಚ್ಚುತ್ತಿರುವ ಭದ್ರತಾ ಸವಾಲುಗಳು", ವಿಶೇಷವಾಗಿ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಹುಸಿ ಬಾಂಬ್ ಬೆದರಿಕೆಗಳನ್ನು ನೀಡುವ "ನಿರಂತರ ಪ್ರವೃತ್ತಿ"ಯ ದೃಷ್ಟಿಯಿಂದ ಇತರ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಳೆದ ಎರಡು ವಾರಗಳಲ್ಲಿ 510ಕ್ಕೂ ಹೆಚ್ಚು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದು, ನಂತರ ಅದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ.
ಹೆಚ್ಚಾಗಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಅನಾಮಧೇಯ ಹ್ಯಾಂಡಲ್‌ಗಳ ಮೂಲಕ ಬೆದರಿಕೆಗಳನ್ನು ಹಾಕಲಾಗಿದೆ. ಇದು ವಿಮಾನಯಾನ ಸಂಸ್ಥೆಗಳಿಗೆ "ಪ್ರಮುಖ" ಕಾರ್ಯಾಚರಣೆ ಮತ್ತು ಆರ್ಥಿಕ ಸಂಕಷ್ಟವನ್ನು ಉಂಟುಮಾಡಿದೆ.
ಇತ್ತೀಚೆಗೆ, ರಾಷ್ಟ್ರೀಯ ತನಿಖಾ ಸಂಸ್ಥೆಯು ತನ್ನ ಸೈಬರ್ ವಿಭಾಗದ ಸಿಬ್ಬಂದಿಯನ್ನು ಬಾಂಬ್ ಬೆದರಿಕೆ ಪರಿಶೀಲನಾ ಸಮಿತಿಯೊಂದಿಗೆ(BTAC) ಇರಿಸಿದೆ ಮತ್ತು ಅವರನ್ನು ದೇಶದಾದ್ಯಂತದ ಪ್ರತಿಯೊಂದು ಪ್ರಮುಖ ವಿಮಾನ ನಿಲ್ದಾಣಗಳಲ್ಲೂ ನಿಯೋಜಿಸಿದೆ.
ಎನ್ಐಎ ಸಿಬ್ಬಂದಿಯಲ್ಲದೆ, ಸಮಿತಿಯು BCAS, CISF, ಸ್ಥಳೀಯ ಪೊಲೀಸ್, ವಿಮಾನ ನಿಲ್ದಾಣದ ನಿರ್ವಾಹಕರು ಮತ್ತು ವಿಮಾನಯಾನ ಅಧಿಕಾರಿಗಳು ಹಾಗೂ ಇತರ ಕೆಲವು ಏಜೆನ್ಸಿಗಳ ಪ್ರತಿನಿಧಿಗಳನ್ನು ಸಹ ನಿಯೋಜಿಸಲಾಗಿದೆ.
ಅಧಿಕಾರಿಗಳ ಪ್ರಕಾರ, BTAC, ಅಕ್ಟೋಬರ್ 19 ರಂದು ಹೊರಡಿಸಿದ ಹೊಸ BCAS ಮಾರ್ಗಸೂಚಿಗಳ ಪ್ರಕಾರ, ಬೆದರಿಕೆಗಳನ್ನು ನಿರ್ಣಯಿಸಲು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹೊರಡಿಸಲಾದ ಅಂತಹ ಬೆದರಿಕೆಗಳ "ವಿಶ್ವಾಸಾರ್ಹತೆ ಮತ್ತು ಗಂಭೀರತೆಯನ್ನು" ನಿರ್ಧರಿಸಲು "ಮಲ್ಟಿ ಲೇಯೆರೆಡ್" ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ.
Advertisement