ಅಮೃತಸರ: ಇಲ್ಲಿಗೆ ಸಮೀಪದ ಬಾಡಿಗೆ ಮನೆಯೊಂದರಲ್ಲಿ ನಡೆಸುತ್ತಿದ್ದ ಅಕ್ರಮ ಪಟಾಕಿ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, 7 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಅಮೃತಸರ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಜಂಡಿಯಾಲ ಪಟ್ಟಣದ ನಾಗಲ್ ಗುರು ಗ್ರಾಮದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ.
ಮನೆಯಲ್ಲಿ ಪಟಾಕಿ ತಯಾರಿಕೆಗೆ ಬಳಸುವ ಅಪಾರ ಪ್ರಮಾಣದ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಇವುಗಳಿಗೆ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ.
ಸ್ಫೋಟದಲ್ಲಿ ಏಳು ಮಂದಿ ಗಾಯಗೊಂಡಿದ್ದು, ಮನೆ ಇದ್ದ ಕಟ್ಟಡದ ಗೋಡೆಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳು ಅಮೃತಸರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತನ್ನ ಮನೆಯಲ್ಲಿ ಅಕ್ರಮ ಪಟಾಕಿ ಘಟಕ ನಡೆಸುತ್ತಿರುವ ಬಗ್ಗೆ ನನಗೆ ತಿಳಿದಿರಲಿಲ್ಲ ಮತ್ತು ಸ್ಫೋಟದ ನಂತರವೇ ಈ ಬಗ್ಗೆ ತಿಳಿದು ಬಂದಿದೆ ಎಂದು ಮನೆಯ ಮಾಲೀಕರು ಹೇಳಿದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement