
ನವದೆಹಲಿ: ಎಎಪಿ ಮಾಜಿ ಸಂವಹನ ಮುಖ್ಯಸ್ಥ ವಿಜಯ್ ನಾಯರ್ ಮತ್ತು ಬಿಭವ್ ಕುಮಾರ್ ಅವರು ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಬಿಡುಗಡೆಯಾದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ವಿರುದ್ಧ ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮತ್ತು ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರು ಬುಧವಾರ ವಾಗ್ದಾಳಿ ನಡೆಸಿದ್ದಾರೆ.
ಬಿಭವ್ ಕುಮಾರ್ ಜಾಮೀನು ಪಡೆದ ನಂತರ ಹಲ್ಲೆಗೊಳಗಾದ ಸಮಯದಲ್ಲಿ ಮನೆಯಲ್ಲಿದ್ದ ದೆಹಲಿ ಮುಖ್ಯಮಂತ್ರಿಯ ಪತ್ನಿಗೆ, "ತುಂಬಾ ಸಮಾಧಾನ"ವಾಗಿದೆ ಎಂದು ಸ್ವಾತಿ ಮಲಿವಾಲ್ ಅವರು ಹೇಳಿದ್ದಾರೆ.
ಸುನೀತಾ ಕೇಜ್ರಿವಾಲ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬಿಭವ್ ಕುಮಾರ್ ಮತ್ತು ವಿಜಯ್ ನಾಯರ್ ಅವರ ಫೋಟೋಗಳನ್ನು ಹಾಕಿ, "ಸುಕೂನ್ ಭಾರ ದಿನ್" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದರು.
ದೆಹಲಿ ಸಿಎಂ ಪತ್ನಿ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಮಲಿವಾಲ್, ‘ನನ್ನನ್ನು ಥಳಿಸುವಾಗ ಮನೆಯಲ್ಲಿದ್ದ ಮುಖ್ಯಮಂತ್ರಿ ಪತ್ನಿಗೆ ಈಗ ತುಂಬಾ ಸಮಾಧಾನವಾಗಿದೆ’ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ತನ್ನ ಮನೆಯಲ್ಲಿ ನನ್ನನ್ನು ಥಳಿಸಿ, ಅನುಚಿತವಾಗಿ ವರ್ತಿಸಿದ ವ್ಯಕ್ತಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವುದರಿಂದ ಅವರಿಗೆ ಸಮಾಧಾನವಾಗಿದೆ. ಇದು ಎಲ್ಲರಿಗೂ ಸ್ಪಷ್ಟವಾದ ಸಂದೇಶ. ಮಹಿಳೆಯರನ್ನು ಹೊಡೆಯಿರಿ, ನಂತರ, ನಾವು ಕೊಳಕು ಟ್ರೋಲಿಂಗ್ ಮಾಡಿ, ಸಂತ್ರಸ್ತೆಯನ್ನು ಸಂಪೂರ್ಣವಾಗಿ ಹಾಳು ಮಾಡುತ್ತೇವೆ ಮತ್ತು ಆ ವ್ಯಕ್ತಿಯನ್ನು ನ್ಯಾಯಾಲಯದಲ್ಲಿ ರಕ್ಷಿಸಲು ದೇಶದ ಅತ್ಯಂತ ದುಬಾರಿ ವಕೀಲರ ಸೈನ್ಯವನ್ನು ನೇಮಿಸುತ್ತೇವೆ! ಎಂದು ಮಲಿವಾಲ್ ಪೋಸ್ಟ್ ಹಾಕಿದ್ದಾರೆ.
ಇಂತಹವರನ್ನು ನೋಡಿದರೆ ನಾವು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಗೌರವವನ್ನು ಹೇಗೆ ನಿರೀಕ್ಷಿಸಬಹುದು? ದೇವರು ಎಲ್ಲವನ್ನೂ ನೋಡುತ್ತಿದ್ದಾನೆ, ನ್ಯಾಯ ಸಿಗಲಿದೆ ಎಂದು ಮಲಿವಾಲ್ ಹೇಳಿದ್ದಾರೆ.
Advertisement