ಪ್ರಧಾನಿ ಮೋದಿ ಮಾನಸಿಕವಾಗಿ ಕುಗ್ಗಿದ್ದಾರೆ, ಇನ್ನು ಕೆಲ ದಿನಗಳಲ್ಲಿ ಅವರ ಸರ್ಕಾರವನ್ನು ಕಿತ್ತೆಸೆಯುತ್ತೇವೆ: ರಾಹುಲ್ ಗಾಂಧಿ
ಜಮ್ಮು: ಈ ಬಾರಿಯ ಲೋಕಸಭೆ ಚುನಾವಣೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾಸ ಕಳೆದುಕೊಂಡಿದ್ದಾರೆ. ಅವರ ನೇತೃತ್ವದ ಎನ್ ಡಿಎ ಸರ್ಕಾರವನ್ನು ಕಿತ್ತೊಗೆಯುವ ಸಮಯ ದೂರವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬನಿಹಾಲ್ ವಿಧಾನಸಭಾ ಕ್ಷೇತ್ರದ ಸಂಗಲ್ದನ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಅವರ ಕಾರ್ಪೊರೇಟ್ ವಲಯದ ಸ್ನೇಹಿತರಿಂದ ನಡೆಯುತ್ತಿದೆ ಎಂದು ಟೀಕಿಸಿದರು.
ನಿರುದ್ಯೋಗ ಸಮಸ್ಯೆಯನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಜಿಎಸ್‌ಟಿ ಮತ್ತು ನೋಟು ಅಮಾನ್ಯೀಕರಣವು ಸಣ್ಣ ಉದ್ಯಮಗಳ ಹಿತಾಸಕ್ತಿಗಳಿಗೆ ಹಾನಿಯನ್ನುಂಟುಮಾಡಿದೆ, ಸರ್ಕಾರವು ಕೇವಲ ಎರಡು ಬಿಲಿಯನೇರ್‌ಗಳ ಪರವಾಗಿ ಮಾತ್ರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಮೋದಿಯವರ ಕಾರ್ಪೊರೇಟ್ ಸ್ನೇಹಿತರಾದ ಅದಾನಿ ಮತ್ತು ಅಂಬಾನಿ ಹೆಸರು ಹೇಳಬೇಡಿ ಎಂದು ನನಗೆ ಹೇಳುತ್ತಾರೆ. ಹಾಗಾಗಿ ನಾನು ಅವರಿಗೆ ಅಲಿಯಾಸ್ ಎ1 ಮತ್ತು ಅಲಿಯಾಸ್ ಎ2 ಎಂದು ಕರೆಯುತ್ತೇನೆ. ಈ ಸರ್ಕಾರವು 'ನಾವು ಇಬ್ಬರು, ನಮ್ಮ ಇಬ್ಬರು' ಎಂಬ ತತ್ವವನ್ನು ಪಾಲಿಸುತ್ತಿದೆ, ಮೋದಿ ಮತ್ತು ಶಾ, ಮತ್ತು ಅಂಬಾನಿ ಮತ್ತು ಅದಾನಿ, ಈ ನಾಲ್ವರು ನಿಜವಾಗಿಯೂ ಸರ್ಕಾರವನ್ನು ನಡೆಸುತ್ತಿರುವವರು ಎಂದರು.
ಇಬ್ಬರು ಶತಕೋಟ್ಯಾಧಿಪತಿಗಳಿಗೆ ಅನುಕೂಲವಾಗಲು ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ ರಾಜ್ಯ ಸ್ಥಾನಮಾನವನ್ನು ಕಿತ್ತುಕೊಳ್ಳಲಾಯಿತು ಎಂದು ಕೂಡ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದರು.
ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯು ದೇಶದ ಇತರ ಭಾಗಗಳಿಗಿಂತ ಕೆಟ್ಟದಾಗಿದೆ. ಇಲ್ಲಿ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆಯಿದೆ. ಯುವಜನತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರವು ಏನನ್ನೂ ಮಾಡಿಲ್ಲ. ಪ್ರಧಾನಿ ಮೋದಿ ಅವರಿಗೆ ಸವಾಲು ಹಾಕಲು ವಿರೋಧ ಪಕ್ಷಗಳು ಇಂಡಿಯಾ ಬ್ಲಾಕ್ ಒಕ್ಕೂಟದಡಿ ಒಗ್ಗೂಡಿದಾಗ ಅವರ ವಿಶ್ವಾಸ ಕುಸಿದಿದೆ ಎಂದಿದ್ದಾರೆ.
ನಾವು ಮೋದಿಯನ್ನು ಮಾನಸಿಕವಾಗಿ ಮುಗಿಸಿದ್ದೇವೆ. ನಾನು ಸಂಸತ್ತಿನಲ್ಲಿ ಅವರ ಮುಂದೆ ಕುಳಿತುಕೊಳ್ಳುತ್ತೇನೆ, ಅವರ ವಿಶ್ವಾಸವು ಕುಗ್ಗಿದೆ. ಈಗ ಸ್ವಲ್ಪ ಸಮಯ ಉಳಿದಿದೆ, ಅಷ್ಟರಲ್ಲಿ ಮೋದಿ ಮತ್ತು ಬಿಜೆಪಿ ಸರ್ಕಾರವನ್ನು ತೆಗೆದುಹಾಕುತ್ತೇವೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಮತ್ತು ಪಕ್ಷದ ಮಾಜಿ ಜಮ್ಮು ಮತ್ತು ಕಾಶ್ಮೀರ ಘಟಕದ ಮುಖ್ಯಸ್ಥ ವಿಕಾರ್ ರಸೂಲ್ ವಾನಿ ಅವರನ್ನು ಬೆಂಬಲಿಸಿ ರಾಂಬನ್ ಜಿಲ್ಲೆಯ ಬನಿಹಾಲ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ರ್ಯಾಲಿಯ ನಂತರ, ರಾಹುಲ್ ಗಾಂಧಿ ಅವರು ಗುಲಾಮ್ ಅಹ್ಮದ್ ಮಿರ್‌ಗಾಗಿ ಅನಂತನಾಗ್ ಜಿಲ್ಲೆಯ ಡೂರು ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಂದು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ರ್ಯಾಲಿಗಳು ಸೆಪ್ಟೆಂಬರ್ 18 ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಪ್ರಚಾರದ ಭಾಗವಾಗಿದೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ 90 ಸದಸ್ಯರನ್ನು ಆಯ್ಕೆ ಮಾಡಲು ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1 ರಂದು ಮತದಾನ ನಡೆಯಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ