ಕೋಲ್ಕತ್ತಾ: ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ. ಸಂದೀಪ್ ಘೋಷ್, ಸರ್ಕಾರಿ ಆಸ್ಪತ್ರೆಯಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಕೆಲವು ಕಿಕ್ ಬ್ಯಾಕ್ ಗಳನ್ನು ಪಡೆದಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ (CBI) ಬಹಿರಂಗಪಡಿಸಿದೆ.
ಕಳೆದ ತಿಂಗಳು ಆಸ್ಪತ್ರೆಯಲ್ಲಿ ತರಬೇತಿ ನಿರತ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣ ನಂತರ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಆರ್ಥಿಕ ಅಕ್ರಮಗಳ ಬಗ್ಗೆ ಸಂಸ್ಥೆ ಘೋಷ್ ಅವರನ್ನು ಎರಡು ವಾರಗಳ ಕಾಲ ಪ್ರಶ್ನಿಸಿತ್ತು, ಅಂತಿಮವಾಗಿ ಸೆಪ್ಟೆಂಬರ್ 2 ರಂದು ಅವರನ್ನು ಬಂಧಿಸಲಾಯಿತು.
ಸಂದೀಪ್ ಘೋಷ್ ಅವರು ನಿನ್ನೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು, ಸಂಸ್ಥೆಯಲ್ಲಿ ಹಣಕಾಸಿನ ಅವ್ಯವಹಾರಗಳನ್ನು ಆರೋಪಿಸಿರುವ ಅರ್ಜಿಗೆ ಕಕ್ಷಿದಾರರಾಗಿ ಸೇರಿಸಲು ತನ್ನ ಮನವಿಯನ್ನು ವಜಾಗೊಳಿಸಿದ ಕೋಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದರು.
ಸಿಬಿಐ ಮೂಲಗಳ ಪ್ರಕಾರ, ಘೋಷ್ ಅವರು ಅನರ್ಹ ವೈದ್ಯಕೀಯ ವಿದ್ಯಾರ್ಥಿಗಳಿಗೆ ವರ್ಗಾವಣೆ, ಪೋಸ್ಟಿಂಗ್ ಮತ್ತು ಪಾಸ್ ಅಂಕಗಳನ್ನು ಒದಗಿಸಲು ಶೇಕಡಾ 40ರಷ್ಟು ಕಮಿಷನ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ವೈದ್ಯರ ಅಕ್ರಮ ವರ್ಗಾವಣೆ ಮತ್ತು ಪೋಸ್ಟಿಂಗ್‌ಗಳ ದಂಧೆಯು ಹೆಚ್ಚಾಗುತ್ತಿದ್ದು ಅವರ ಕಮಿಷನ್ ಕ್ರಮೇಣ ಶೇಕಡಾ 10 ಕ್ಕೆ ಇಳಿದಿದೆ, ಹೆಚ್ಚುತ್ತಿರುವ ವೈದ್ಯರ ನಡುವೆ ಹಣವನ್ನು ವಿತರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ಡಾ. ಅಭಿಕ್ ಘೋಷ್ ಅವರನ್ನು ಅಕ್ರಮ ವರ್ಗಾವಣೆ ಮತ್ತು ಪೋಸ್ಟಿಂಗ್ ದಂಧೆ ನಡೆಸುವಲ್ಲಿ ಪ್ರಮುಖ ವ್ಯಕ್ತಿ ಎಂದು ಸಿಬಿಐ ಮೂಲಗಳು ಗುರುತಿಸಿವೆ. ಈ ಯೋಜನೆಯಲ್ಲಿ ಭಾಗಿಯಾಗಿರುವ ಇತರ ಹಿರಿಯ ವೈದ್ಯರಿಗಾಗಿಯೂ ಕೇಂದ್ರ ತನಿಖಾ ಸಂಸ್ಥೆ ಹುಡುಕಾಟ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ವೈದ್ಯಕೀಯ ಹಗರಣಗಳಲ್ಲಿ ಭಾಗಿಯಾಗಿರುವ ಮಾರಾಟಗಾರರಿಗೆ ನೀಡಿದ ಪ್ರತಿ ಟೆಂಡರ್‌ನಲ್ಲಿ ಘೋಷ್ ಶೇಕಡಾ 20 ರಿಂದ 30ರಷ್ಟು ಕಮಿಷನ್ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಅಂತಹ ಟೆಂಡರ್‌ಗಳನ್ನು ಮಾರಾಟಗಾರರಾದ ಬಿಪ್ಲವ್ ಸಿಂಘಾ ಮತ್ತು ಸುಮನ್ ಹಜ್ರಾ ಅವರಿಗೆ ನಿಯಮಾವಳಿಗಳನ್ನು ಉಲ್ಲಂಘಿಸಿ ನೀಡಲಾಗಿದೆ ಎಂದು ವರದಿಯಾಗಿದೆ, ಸಿಬಿಐ ಸಂದೀಪ್ ಘೋಷ್ ಅವರನ್ನು ಸೋಮವಾರ ಬಂಧಿಸಿದೆ.
Advertisement