ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆರ್ಟಿಕಲ್ 370 ಮರುಸ್ಥಾಪಿಸುವುದು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅಮಿತ್ ಶಾ, "ಆರ್ಟಿಕಲ್ 370 ಇತಿಹಾಸದ ಭಾಗವಾಗಿದೆ ಮತ್ತು ಎಂದಿಗೂ ಹಿಂತಿರುಗುವುದಿಲ್ಲ" ಎಂದು ಹೇಳಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿರುವ ನ್ಯಾಷನಲ್ ಕಾನ್ಫರೆನ್ಸ್ ತನ್ನ ಪ್ರಣಾಳಿಕೆಯಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370ನೇ ವಿಧಿಯನ್ನು 2019 ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ನಾನು ನ್ಯಾಷನಲ್ ಕಾನ್ಫರೆನ್ಸ್‌ನ "ಅಜೆಂಡಾ"ವನ್ನು ಪರಿಶೀಲಿಸಿದ್ದೇನೆ. ಆದರೆ 370ನೇ ವಿಧಿ ಈಗ ಇತಿಹಾಸದ ಭಾಗವಾಗಿದೆ. ಅದನ್ನು ಎಂದಿಗೂ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
370ನೇ ವಿಧಿ ಇನ್ನು ಮುಂದೆ ಸಂವಿಧಾನದ ಭಾಗವಲ್ಲ ಎಂದು ಒತ್ತಿ ಹೇಳಿದ ಅಮಿತ್ ಶಾ, ಇದರಿಂದ ಯುವಕರಿಗೆ ಭಯೋತ್ಪಾದನೆಯನ್ನು ಮುಂದುವರಿಸಲು ಶಸ್ತ್ರಾಸ್ತ್ರಗಳನ್ನು ಒದಗಿಸುತ್ತದೆ ಎಂದು ಟೀಕಿಸಿದರು.
"ಆರ್ಟಿಕಲ್ 370 ಯುವಕರ ಕೈಯಲ್ಲಿ ಶಸ್ತ್ರಾಸ್ತ್ರ ಮತ್ತು ಕಲ್ಲುಗಳನ್ನು ಮಾತ್ರ ನೀಡಿಲ್ಲ. ಭಯೋತ್ಪಾದನೆಯ ಹಾದಿಯನ್ನು ತುಳಿಯಲು ಅನುಕೂಲ ಮಾಡಿಕೊಟ್ಟಿದೆ" ಎಂದು ಅಮಿತ್ ಶಾ ಹೇಳಿದರು.
"ನಾನು ಒಮರ್ ಅಬ್ದುಲ್ಲಾ ಅವರಿಗೆ ಹೇಳಲು ಬಯಸುತ್ತೇನೆ, ಫಲಿತಾಂಶ ಏನೇ ಇರಲಿ, ಗುಜ್ಜರ್, ಬಕ್ಕರ್ವಾಲ್ ಮತ್ತು ಪಹಾಡಿಗಳಿಗೆ ನೀಡಲಾದ ಮೀಸಲಾತಿಯನ್ನು ಮುಟ್ಟಲು ನಾವು ನಿಮಗೆ ಅವಕಾಶ ನೀಡುವುದಿಲ್ಲ. ಜಮ್ಮು ಮತ್ತು ಕಾಶ್ಮೀರದಿಂದ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಅಮಿತ್ ಶಾ ವಾಗ್ದಾನ ಮಾಡಿದರು.
ಜಮ್ಮು ಮತ್ತು ಕಾಶ್ಮೀರದ ಜನತೆಗೆ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದ ಅಮಿತ್ ಶಾ, "ಈ ಪ್ರದೇಶದ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ನಮಗೆ ಐದು ವರ್ಷಗಳ ಅಧಿಕಾರಾವಧಿಯನ್ನು ನೀಡಿ" ಎಂದರು.
ಬಿಜೆಪಿ ಪ್ರಣಾಳಿಕೆಯಲ್ಲಿ ಪ್ರತಿ ಕುಟುಂಬದ ಹಿರಿಯ ಮಹಿಳೆಗೆ ವಾರ್ಷಿಕವಾಗಿ 18,000 ರೂ. ನೀಡುವ 'ಮಾ ಸಮ್ಮಾನ್ ಯೋಜನೆ', ಉಜ್ವಲ ಯೋಜನೆಯಡಿ ವರ್ಷಕ್ಕೆ ಎರಡು ಉಚಿತ ಸಿಲಿಂಡರ್‌ಗಳು ಸೇರಿದಂತೆ ಹಲವು ಭರವಸೆಗಳನ್ನು ನೀಡಲಾಗಿದೆ.
Advertisement