ಅಮರಾವತಿ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಟಿಡಿಪಿ ಶಾಸಕ ಕೋನೇಟಿ ಆದಿಮೂಲಂ ಅವರನ್ನು ತೆಲುಗು ದೇಶಂ ಪಾರ್ಟಿಯ ರಾಜ್ಯಾಧ್ಯಕ್ಷ ಪಿ. ಶ್ರೀನಿವಾಸ ರಾವ್ ಅಮಾನತು ಮಾಡಿದ್ದಾರೆ.
ಆದಿಮೂಲಂ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪರಿಶಿಷ್ಟ ಮೀಸಲು ಕ್ಷೇತ್ರ ಸತ್ಯವೇಡು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು.
ಆದಿಮೂಲಂ ನನಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದ ಮಹಿಳೆ, ಶಾಸಕನೊಂದಿಗೆ ತಾನು ಕಳೆದ ಖಾಸಗಿ ಕ್ಷಣಗಳನ್ನು ಪೆನ್ ಕ್ಯಾಮರಾ ಬಳಸಿ ಚಿತ್ರೀಕರಿಸಿದ್ದರು. ಈ ವಿಡಿಯೋ ಗುರುವಾರ ಬಹಿರಂಗವಾದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.
ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಆದಿಮೂಲಂ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಟಿಡಿಪಿ ಹೇಳಿಕೆಯಲ್ಲಿ ತಿಳಿಸಿದೆ.
ಆದಿಮೂಲಂ 2019ರಲ್ಲಿ ಸತ್ಯವೇಡು ಕ್ಷೇತ್ರದಿಂದ ವೈಎಸ್ ಆರ್ ಕಾಂಗ್ರೆಸ್ ನಿಂದ ಗೆದ್ದಿದ್ದರು. ಆದರೆ, ಈ ಬಾರಿ ಸ್ಪರ್ಧಿಸಲು ಪಕ್ಷದ ಮುಖ್ಯಸ್ಥ ವೈ.ಎಸ್. ಜಗನ್ ಮೋಹನ್ ರೆಡ್ಡಿ ಟಿಕೆಟ್ ನಿರಾಕರಿಸಿದ್ದರಿಂದ ಟಿಡಿಪಿ ಸೇರಿ ಗೆಲುವು ಸಾಧಿಸಿದ್ದರು.
Advertisement