ನವದೆಹಲಿ: ಭಾರತದಲ್ಲಿ ಮೊದಲ Mpox(ಹಿಂದೆ ಮಂಕಿಪಾಕ್ಸ್ ಎಂದು ಕರೆಯಲಾಗುತ್ತಿತ್ತು) ಪ್ರಕರಣ ದೃಢಪಟ್ಟಿದೆ. ಇತ್ತೀಚೆಗೆ ವಿದೇಶದಲ್ಲಿ ಪ್ರಯಾಣ ಮಾಡಿ ಭಾರತಕ್ಕೆ ಬಂದಿದ್ದ ವ್ಯಕ್ತಿಗೆ ಎಂಪಾಕ್ಸ್ ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ಪ್ರಸ್ತುತ ಸೋಂಕಿತ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ ಮತ್ತು ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದೆ. ಈ ಸೋಂಕನ್ನು ಮಂಕಿಪಾಕ್ಸ್ ವೈರಸ್‌ನ 'ಕ್ಲೇಡ್ II' ಮಾದರಿಯ ವೈರಸ್ ಎಂದು ಗುರುತಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಜುಲೈ 2022 ರಿಂದ ಭಾರತದಲ್ಲಿ ವರದಿಯಾದ ಹಿಂದಿನ 30 ಪ್ರಕರಣಗಳಂತೆಯೇ ಇದು ಪ್ರತ್ಯೇಕ ಪ್ರಕರಣವಾಗಿದೆ ಮತ್ತು ಪ್ರಸ್ತುತ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ಭಾಗವಾಗಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಆದಾಗ್ಯೂ, ಇದು ವಿಶ್ವ ಆರೋಗ್ಯ ಸಂಸ್ಥೆ (WHO) ಘೋಷಿಸಿದ ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ಭಾಗವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇದು ವಾಸಿಯಾಗುವ ವೈರಸ್ ಆಗಿದೆ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಪತ್ತೆ, ಚಿಕಿತ್ಸೆ ಮತ್ತು ಪ್ರತ್ಯೇಕತೆಗೆ ಕ್ರಮ ವಹಿಸಲಾಗಿದೆ. ತಕ್ಷಣಕ್ಕೆ ಸಾರ್ವಜನಿಕರಿಗೆ ಯಾವುದೇ ವ್ಯಾಪಕ ಅಪಾಯದ ಸೂಚನೆಯಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
Advertisement