ಗುವಾಹಟಿ: ಭಾರೀ ಭದ್ರತೆಯ ರಾಜಭವನದ ಹೊರಗೆ ಮಾಜಿ ಸೈನಿಕನ ಮೃತದೇಹವನ್ನು ಮಣಿಪುರ ಪೊಲೀಸರು ವಶಪಡಿಸಿಕೊಳ್ಳಲು ಮುಂದಾದಾಗ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ.
ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸುತ್ತಿರುವುದು ಮತ್ತು ಭದ್ರತಾ ಸಿಬ್ಬಂದಿ ಬಲಪ್ರಯೋಗ ಮಾಡಿ ಅವರನ್ನು ಓಡಿಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಕಾಣಬಹುದಾಗಿದೆ. ಪ್ರತಿಭಟನಾಕಾರರು ಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಜನಾಂಗೀಯ ಹಿಂಸಾಚಾರ-ಪೀಡಿತ ಮಣಿಪುರದಲ್ಲಿ ಡ್ರೋಣ್ ಮೂಲಗಳ ದಾಳಿಗಳನ್ನು ನಡೆಸಲಾಗುತ್ತಿದೆ. ಈ ದಾಳಿಗಳಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದು ಹನ್ನೆರಡು ಜನರು ಗಾಯಗೊಂಡಿದ್ದಾರೆ. ಈ ಡ್ರೋಣ್ ದಾಳಿಗಳನ್ನು ವಿರೋಧಿಸಿ ಇಂಫಾಲ್ ಪಶ್ಚಿಮ, ಕಕ್ಚಿಂಗ್ ಮತ್ತು ತೌಬಲ್ ಜಿಲ್ಲೆಗಳಾದ್ಯಂತ ವಿದ್ಯಾರ್ಥಿಗಳು ಬೃಹತ್ ಮೆರವಣಿಗೆಗಳನ್ನು ನಡೆಸಿದರು.
ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಶಾಲೆಗಳನ್ನು ಮುಚ್ಚಿದ್ದರೂ ಸಹ ಸಾವಿರಾರು ಜನರು ಫಲಕಗಳು ಮತ್ತು ಬ್ಯಾನರ್‌ಗಳನ್ನು ಹಿಡಿದುಕೊಂಡು ತಮ್ಮ ಸಮವಸ್ತ್ರವನ್ನು ಧರಿಸಿ ಹೊರಬಂದಿದ್ದರು. ಪ್ರತಿಭಟನಾಕಾರರು ರಾಜಭವನದ ಹೊರಗೆ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್, ಪೊಲೀಸ್ ಮಹಾನಿರ್ದೇಶಕ ರಾಜೀವ್ ಸಿಂಗ್ ಮತ್ತು 50 ಶಾಸಕರು 'ನೈತಿಕ ಆಧಾರದ ಮೇಲೆ' ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ನಾಗಾ ಮತ್ತು ಕುಕಿ-ಜೋ ಸಮುದಾಯದ ತಲಾ 10 ಸೇರಿದಂತೆ ಮಣಿಪುರವು 60 ಶಾಸಕರನ್ನು ಹೊಂದಿದೆ.
ಇತ್ತೀಚಿನ ರಾಕೆಟ್ ಮತ್ತು ಡ್ರೋಣ್ ಬಾಂಬ್ ದಾಳಿ, ಹತ್ಯೆಗಳು ಮತ್ತು ಅಗ್ನಿ ಘಟನೆಗಳ ಬಗ್ಗೆ ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದರು. ಅಲ್ಲದೆ ಪರಿಸ್ಥಿತಿಯನ್ನು ನಿಯಂತ್ರಿಸಲು ವಿಫಲವಾದ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
Advertisement