ನವದೆಹಲಿ: ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರವನ್ನು ಬೀಳಿಸಿ, ರಾಷ್ಟ್ರಪತಿ ಆಡಳಿತ ಹೇರುವ ಮೂಲಕ ಹಿಂಬಾಗಿಲಿನಿಂದ ಸರ್ಕಾರ ನಡೆಸಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಎಎಪಿಯ ಹಿರಿಯ ನಾಯಕಿ ಮತ್ತು ಸಚಿವೆ ಅತಿಶಿ ಅವರು ಮಂಗಳವಾರ ಆರೋಪಿಸಿದ್ದಾರೆ.
ದೆಹಲಿಯು ಸಾಂವಿಧಾನಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚನೆ ನೀಡಿ ಎಂದು ಪ್ರತಿಪಕ್ಷ ಬಿಜೆಪಿ, ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ಎಎಪಿ ನಾಯಕರು ಬಿಜೆಪಿ ವಿರುದ್ಧ ಹರಿಹಾಯ್ದಿದ್ಧಾರೆ.
ಪಿಟಿಐ ಜೊತೆ ಮಾತನಾಡಿದ ಅತಿಶಿ, ಕೇಜ್ರಿವಾಲ್ ಸರ್ಕಾರ ಉರುಳಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶೂನ್ಯ ಸ್ಥಾನ ನೀಡುವ ಮೂಲಕ ದೆಹಲಿಗರು ತಕ್ಕ ಉತ್ತರ ನೀಡಲಿದ್ದಾರೆ ಮತ್ತು ಆಮ್ ಆದ್ಮಿ ಪಕ್ಷ(ಎಎಪಿ) ಎಲ್ಲಾ 70 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದರು.
ಮಹಾರಾಷ್ಟ್ರ, ಕರ್ನಾಟಕ ಮತ್ತು ಮಣಿಪುರದಲ್ಲಿ ನಡೆದಂತೆ ಆಪರೇಷನ್ ಕಮಲದ ಮೂಲಕ ದೇಶದಲ್ಲಿ ಚುನಾಯಿತ ಸರ್ಕಾರಗಳನ್ನು ಉರುಳಿಸುವುದು ಬಿಜೆಪಿಯ ಏಕೈಕ ಕೆಲಸವಾಗಿದೆ ಎಂದು ಅತಿಶಿ ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ ಎಂಬ ಆರೋಪದ ಮೇಲೆ ಎಎಪಿ ಸರ್ಕಾರವನ್ನು ವಜಾಗೊಳಿಸುವಂತೆ ಕೋರಿ ಬಿಜೆಪಿ ಶಾಸಕರು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ಪತ್ರವನ್ನು ಎಂಎಚ್‌ಎಗೆ ರವಾನಿಸಲಾಗಿದೆ ಎಂದು ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ ಸೋಮವಾರ ಹೇಳಿದ್ದಾರೆ.
Advertisement