ಇಂಫಾಲ: ಮಣಿಪುರ ಸರ್ಕಾರಕ್ಕೆ ಭದ್ರತಾ ಸಲಹೆಗಾರ ಹಾಗೂ ಡಿಜಿಪಿಯನ್ನು ಹುದ್ದೆಯಿಂದ ತೆಗೆಯಬೇಕೆಂಬ ಆಗ್ರಹದೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಮೇಲೆ ಅಶ್ರುವಾಯು ಪ್ರಯೋಗಿಸಲಾಗಿದೆ.
ಪ್ರತಿಭಟನಾ ನಿರತರು ರಾಜಭವನದೆಡೆಗೆ ಪ್ರತಿಭಟನಾ ಮೆರವಣಿಗೆ ಕೊಂಡೊಯ್ಯಲು ಯತ್ನಿಸಿದಾಗ ಪೊಲೀಸ್ ಅಧಿಕಾರಿಗಳು ಅವರನ್ನು ತಡೆಯುವ ನಿಟ್ಟಿನಲ್ಲಿ ಅಶ್ರುವಾಯು ಪ್ರಯೋಗಿಸಿದ್ದಾರೆ.
ನೂರಾರು ವಿದ್ಯಾರ್ಥಿಗಳು ಖ್ವೈರಂಬಂಡ್ ಮಹಿಳಾ ಮಾರುಕಟ್ಟೆಯಲ್ಲಿ ಜಮಾಯಿಸಿದ್ದರು. ರಾಜಭವನದೆಡೆಗೆ ಹೋಗುವುದಕ್ಕೂ ಮೊದಲು ಭದ್ರತಾ ಸಿಬ್ಬಂದಿಗಳು ಪ್ರತಿಭಟನಾ ನಿರತರನ್ನು ಕಾಂಗ್ರೆಸ್ ಭವನದ ಬಳಿ ತಡೆದಿದ್ದಾರೆ.
ಇದಕ್ಕೂ ಮೊದಲು ಮಣಿಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನಾ ರ‍್ಯಾಲಿ ನಡೆಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿ ದಹಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಮಣಿಪುರ ಸರ್ಕಾರ ಇಂಫಾಲ್ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಕರ್ಫ್ಯೂ ಮತ್ತು ಥೌಬಲ್‌ನಲ್ಲಿ BNSS ನ ಸೆಕ್ಷನ್ 163 (2) ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿದೆ.
ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆ ನಡುವೆ ಸರ್ಕಾರವು ಇಡೀ ರಾಜ್ಯದಲ್ಲಿ ಐದು ದಿನಗಳ ಕಾಲ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.
ಚಿತ್ರಗಳು, ದ್ವೇಷ ಭಾಷಣ ಮತ್ತು ದ್ವೇಷದ ವೀಡಿಯೊಗಳನ್ನು ಪ್ರಸಾರ ಮಾಡಲು ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ತಡೆಯಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಗೃಹ ಇಲಾಖೆ ತಿಳಿಸಿದೆ.
ಮಣಿಪುರ ರಾಜ್ಯದ ಪ್ರಾದೇಶಿಕ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 10 ರ ಮಧ್ಯಾಹ್ನ 3 ರಿಂದ ಸೆಪ್ಟೆಂಬರ್ 15ರ ಮಧ್ಯಾಹ್ನ 3 ರವರೆಗೆ ಅನ್ವಯವಾಗುವಂತೆ ಐದು ದಿನಗಳ ಕಾಲ ಲೀಸ್ ಲೈನ್‌ಗಳು, VSAT ಗಳು, ಬ್ರಾಡ್‌ಬ್ಯಾಂಡ್‌ಗಳು ಮತ್ತು VPN ಸೇವೆಗಳನ್ನು ಒಳಗೊಂಡಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳ ತಾತ್ಕಾಲಿಕ ಅಮಾನತು / ನಿಗ್ರಹ ಮಾಡಲಾಗಿದೆ." ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
Advertisement