ಬೆಂಗಳೂರು: ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಅವರ ಪತ್ನಿ ಸುಧಾ ಮೂರ್ತಿ ಬೆಂಗಳೂರಿನಲ್ಲಿರುವ ಶ್ರೀಮಂತ ಕುಟುಂಬಗಳ ಪಟ್ಟಿಯಲ್ಲಿ 5 ನೇ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಪ್ರಕಟಗೊಂಡ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2024 ರ ಪ್ರಕಾರ, ಇನ್ಫೋಸಿಸ್ ನ ಸಹ ಸಂಸ್ಥಾಪಕರ ಪೈಕಿ ಒಬ್ಬರಾದ ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರಿಗಿಂತಲೂ ಶ್ರೀಮಂತರಾಗಿದಾರೆ. ಇನ್ಫೋಸಿಸ್ ಗೆ ನಾರಾಯಣ ಮೂರ್ತಿ ಸೇರಿ ಇನ್ನೂ 6 ಮಂದಿ ಸಹ ಸಂಸ್ಥಾಪಕರಿದ್ದಾರೆ.
ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಕುಟುಂಬದ ಒಟ್ಟು ಆಸ್ತಿಯ ಮೌಲ್ಯ 36,600 ಕೋಟಿ ರೂಪಾಯಿಗಳಾಗಿದ್ದರೆ, ಕ್ರಿಸ್ ಗೋಪಾಲಕೃಷ್ಣನ್ ಅವರ ಒಟ್ಟು ಆಸ್ತಿಯ ಮೌಲ್ಯ 38,500 ಕೋಟಿ ರೂಪಾಯಿಗಳಾಗಿವೆ. ಗೋಪಾಲಕೃಷ್ಣನ್ 2007-2011 ವರೆಗೆ ಇನ್ಫೋಸಿಸ್ ನ ಸಿಇಒ ಹಾಗೂ ಎಂಡಿ ಆಗಿ ಕಾರ್ಯನಿರ್ವಹಿಸಿದ್ದರು. 2011-2014 ವರೆಗೆ ಅವರು ಸಂಸ್ಥೆಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಅವರು 2014 ರಲ್ಲಿ ಕಂಪನಿಯಿಂದ ನಿವೃತ್ತರಾದರು, ನಿವೃತ್ತಿಯ ನಂತರ, ಅವರು ತಮ್ಮ ವ್ಯಾಪಾರ ಇನ್ಕ್ಯುಬೇಟರ್ ಆಕ್ಸಿಲರ್ ವೆಂಚರ್ಸ್ ಮತ್ತು ಕೆಲವು ವೆಂಚರ್ ಫಂಡ್ ಗಳ ಮೂಲಕ ಆಟೋಮೊಬೈಲ್ ಸೇವೆಗಳ ಪೂರೈಕೆದಾರರಾದ ಕಿ ಮೊಬಿಲಿಟಿಯಂತಹ ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಈಗ, 69 ವರ್ಷ ವಯಸ್ಸಿನ ಗೋಪಾಲಕೃಷ್ಣನ್ ಆಕ್ಸಿಲರ್ ವೆಂಚರ್ಸ್‌ನ ಅಧ್ಯಕ್ಷರಾಗಿದ್ದಾರೆ, ಇದು ಗುಡ್‌ಹೋಮ್, ಕಾಗಾಜ್ ಮತ್ತು ಎನ್‌ಕಾಶ್ ಸೇರಿದಂತೆ ಹಲವಾರು ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಸ್ಟಾರ್ಟಪ್ ವೇಗವರ್ಧಕವಾಗಿದೆ.
ಗೋಪಾಲಕೃಷ್ಣ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್‌ನಿಂದ ಭೌತಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜನವರಿ 2011 ರಲ್ಲಿ, ಭಾರತ ಸರ್ಕಾರ ಗೋಪಾಲಕೃಷ್ಣ ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣವನ್ನು ನೀಡಿದೆ. ಅವರು ಐಐಟಿ ಮದ್ರಾಸ್‌ನಲ್ಲಿ ತಮ್ಮ ಪತ್ನಿಯ ಹೆಸರಿನ ಸುಧಾ ಗೋಪಾಲಕೃಷ್ಣನ್ ಬ್ರೈನ್ ರಿಸರ್ಚ್ ಸೆಂಟರ್‌ಗೆ ಧನಸಹಾಯ ಮಾಡಿದ್ದಾರೆ.
ಇದಷ್ಟೇ ಅಲ್ಲದೇ ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಬೆಂಗಳೂರಿನ ಐಐಐಟಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ ಮತ್ತು ಇನ್ಫೋಸಿಸ್ ವೆಬ್‌ಸೈಟ್‌ನ ಪ್ರಕಾರ ಚೆನ್ನೈ ಮ್ಯಾಥಮೆಟಿಕಲ್ ಇನ್‌ಸ್ಟಿಟ್ಯೂಟ್‌ನ ಟ್ರಸ್ಟಿಗಳ ಮಂಡಳಿಯಲ್ಲಿದ್ದಾರೆ.
ಇನ್ಫೋಸಿಸ್ ನ್ನು ಜುಲೈ 1981 ರಲ್ಲಿ ಪುಣೆಯಲ್ಲಿ ಸ್ಥಾಪಿಸಲಾಯಿತು ಆದರೆ ಪ್ರಸ್ತುತ ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ನಾರಾಯಣ ಮೂರ್ತಿ, ನಂದನ್ ನಿಲೇಕಣಿ, ಕ್ರಿಸ್ ಗೋಪಾಲಕೃಷ್ಣನ್, ಎಸ್‌ಡಿ ಶಿಬುಲಾಲ್, ಕೆ ದಿನೇಶ್, ಎನ್‌ಎಸ್ ರಾಘವನ್ ಮತ್ತು ಅಶೋಕ್ ಅರೋರಾ ಸೇರಿದಂತೆ ಏಳು ಎಂಜಿನಿಯರ್‌ಗಳು ಈ ಸಂಸ್ಥೆಯನ್ನು ಸ್ಥಾಪಿಸಿದ್ದರು.
Advertisement