ಛತ್ತೀಸ್‌ಗಢ: ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು ಬಿಯರ್ ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಶಿಕ್ಷಣ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಮಸ್ತೂರಿ ಪ್ರದೇಶದ ಭಟಚೌರಾ ಗ್ರಾಮದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜುಲೈ 29 ರಂದು ಈ ಘಟನೆ ನಡೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹುಡುಗಿಯರು ಬಿಯರ್ ಮತ್ತು ತಂಪು ಪಾನೀಯಗಳನ್ನು ಕುಡಿಯುತ್ತಿರುವುದನ್ನು ಕಾಣಬಹುದು ಎಂದು ಬಿಲಾಸ್‌ಪುರದ ಜಿಲ್ಲಾ ಶಿಕ್ಷಣಾಧಿಕಾರಿ(ಡಿಇಒ) ಟಿಆರ್ ಸಾಹು ತಿಳಿಸಿದ್ದಾರೆ.
ಘಟನೆಯ ಕುರಿತು ತನಿಖೆಗೆ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಮತ್ತು ತಂಡವು ಸೋಮವಾರ ಸಂಬಂಧಪಟ್ಟ ವಿದ್ಯಾರ್ಥಿನಿಯರ ಮತ್ತು ಶಿಕ್ಷಕರ ಹೇಳಿಕೆಗಳನ್ನು ದಾಖಲಿಸಿದೆ ಎಂದು ಅವರು ಹೇಳಿದ್ದಾರೆ.
ವಿಡಿಯೋ ಮಾಡುವಾಗ ಮೋಜಿಗಾಗಿ ಬಿಯರ್ ಬಾಟಲಿಗಳನ್ನು ಹಿಡಿದಿದ್ದಾರೆ. ಆದರೆ ಪಾನೀಯ ಸೇವಿಸಿಲ್ಲ ಎಂದು ವಿದ್ಯಾರ್ಥಿನಿಯರು ತನಿಖಾ ತಂಡಕ್ಕೆ ತಿಳಿಸಿದ್ದಾರೆ ಎಂದು ಸಾಹು ಹೇಳಿದ್ದಾರೆ.
ಶಾಲೆಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಪ್ರಾಂಶುಪಾಲರು ಮತ್ತು ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಸಂಬಂಧಪಟ್ಟ ಬಾಲಕಿಯರ ಪೋಷಕರಿಗೆ ನೋಟಿಸ್ ಕಳುಹಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ಜುಲೈ 29 ರಂದು ಕೆಲವು ಹುಡುಗಿಯರು ತಮ್ಮ ಸಹಪಾಠಿಯ ಹುಟ್ಟುಹಬ್ಬವನ್ನು ತರಗತಿಯೊಳಗೆ ಆಚರಿಸಿದರು. ಈ ವೇಳೆ ನಡೆದ ಪಾರ್ಟಿಯಲ್ಲಿ ಬಿಯರ್ ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ವಿದ್ಯಾರ್ಥಿಯೊಬ್ಬರು ಅದರ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Advertisement