ಲಖನೌ: ಉತ್ತರ ಪ್ರದೇಶದ ಕುಶಿನಗರದಲ್ಲಿ ಪಾರ್ಟಿಗಾಗಿ ಡ್ಯಾನ್ಸರ್ ಗಳನ್ನು ಅಪಹರಣ ಮಾಡಿದ್ದ 8 ಮಂದಿಯನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಸಂಗೀತ ಕಾರ್ಯಕ್ರಮಗಳಲ್ಲಿ ನೃತ್ಯಗಾರ್ತಿಯರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಯುವತಿಯರನ್ನು ಗನ್ ಪಾಯಿಂಟ್ ನಲ್ಲಿ ಈ 8 ಮಂದಿ ಅಪಹರಿಸಿದ್ದರು. ಹಣಕ್ಕಾಗಿ ಅಲ್ಲದೇ, ಹುಟ್ಟಿದಹಬ್ಬದ ಕಾರ್ಯಕ್ರಮವೊಂದಕ್ಕೆ ನೃತ್ಯ ಮಾಡುವುದಕ್ಕಾಗಿ ಅಪಹರಣ ಮಾಡಿದ್ದರು.
ಭಾನುವಾರ ತಡ ರಾತ್ರಿ ಈ ಘಟನೆ ನಡೆದಿತ್ತು. ಆರೋಪಿಗಳು ಅಜಿತ್ ಸಿಂಗ್- ಆರೋಪಿಗಳ ಪೈಕಿ ಓರ್ವನ ಹುಟ್ಟು ಹಬ್ಬ ಆಚರಿಸಲು ಮುಂದಾಗಿದ್ದರು. ಮದಿರೆಯ ಮತ್ತಿನಲ್ಲಿ ಅವರು ಪಾರ್ಟಿಯಲ್ಲಿ ಪ್ರದರ್ಶನ ನೀಡುವುದಕ್ಕಾಗಿ ನೃತ್ಯಗಾರ್ತಿಯರಿಗಾಗಿ ಹುಡುಕುತ್ತಿದ್ದರು. ನೃತ್ಯಗಾರ್ತಿಯರು ಬಾಡಿಗೆಗೆ ಪಡೆದು ತಂಗಿದ್ದ ರೂಮ್ ಗಳಿಗೆ ತೆರಳಿ ನೃತ್ಯಗಾರ್ತಿಯರನ್ನು ಕಾರ್ಯಕ್ರಮಕ್ಕೆ ಬರುವಂತೆ ಕೇಳಿದ್ದರು. ಆದರೆ ನೃತ್ಯಗಾರ್ತಿಯರು ಇದಕ್ಕೆ ಒಪ್ಪಿಗೆ ನೀಡದ ಕಾರಣ ಗನ್ ತೋರಿಸಿ ಅವರನ್ನು ಒತ್ತಾಯಪೂರ್ವಕವಾಗಿ ಹೊತ್ತೊಯ್ದಿದ್ದಾರೆ.
ಆರೋಪಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದು ಸ್ಥಳೀಯರಲ್ಲಿ ಭೀತಿ ಉಂಟು ಮಾಡಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಜಿತ್ ಸಿಂಗ್ ನಿವಾಸಕ್ಕೆ ತೆರಳಿ ನೃತ್ಯಗಾರ್ತಿಯರನ್ನು ರಕ್ಷಿಸಿ ಅಜಿತ್ ಸಿಂಗ್ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ಪೊಲೀಸರು 25,000 ರೂಪಾಯಿಗಳ ನಗದು ಬಹುಮಾನ ಘೋಷಿಸಿದ್ದರು. ಕಾರ್ಯಾಚರಣೆ ವೇಳೆ ಆರೋಪಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿದಾಳಿಯಲ್ಲಿ ಪೊಲೀಸರೂ ಗುಂಡು ಹಾರಿಸಿದ್ದು, ಇಬ್ಬರು ಆರೋಪಿಗಳ ಕಾಲಿಗೆ ಗುಂಡು ತಗುಲಿದೆ. ಆರೋಪಿಗಳ ಕಾಲಿಗೆ ಪ್ಲಾಸ್ಟರ್ ಕಟ್ಟಿ ಅವರು ವ್ಹೀಲ್ ಚೇರ್ ಮೇಲೆ ಕುಳಿತಿರುವ ಫೋಟೋಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
Advertisement