ಕೋಲ್ಕತ್ತಾ: ಸೆಪ್ಟೆಂಬರ್ 10 ರಂದು ಸಂಜೆ 5 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನವನ್ನು ಧಿಕ್ಕರಿಸಿ ಧರಣಿ ನಡೆಸುತ್ತಿರುವ ಕಿರಿಯ ವೈದ್ಯರ ಪ್ರತಿಭಟನೆ ಬುಧವಾರ 33ನೇ ದಿನಕ್ಕೆ ಕಾಲಿಟ್ಟಿದೆ.
ಆರ್‌ಜಿ ಕರ್ ಆಸ್ಪತ್ರೆಯ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ಕೋಲ್ಕತ್ತಾ ಪೊಲೀಸ್ ಆಯುಕ್ತರು, ಆರೋಗ್ಯ ಕಾರ್ಯದರ್ಶಿ, ಆರೋಗ್ಯ ಸೇವೆಗಳ ನಿರ್ದೇಶಕರು ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕರನ್ನು ತೆಗೆದುಹಾಕುವಂತೆ ಒತ್ತಾಯಿಸಿ ಕಿರಿಯ ವೈದ್ಯರು ಇಂದು ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಛೇರಿ ಸ್ವಾಸ್ಥ್ಯ ಭವನದ ಹೊರಗೆ ಧರಣಿ ಮುಂದುವರೆಸಿದ್ದಾರೆ.
ಮಂಗಳವಾರ ಸಂಜೆ 5 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಪ್ರತಿಭಟನಾನಿರತ ಕಿರಿಯ ವೈದ್ಯರಿಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿತ್ತು ಮತ್ತು ಕೆಲಸ ಪುನರಾರಂಭಿಸಿದ ನಂತರ ಅವರ ವಿರುದ್ಧ ಯಾವುದೇ ಪ್ರತಿಕೂಲ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿತ್ತು.
ಪ್ರತಿಭಟನಾನಿರತ ವೈದ್ಯರ ವಿರುದ್ಧ ಶಿಕ್ಷಾರ್ಹ ವರ್ಗಾವಣೆ ಸೇರಿದಂತೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಭರವಸೆ ನೀಡಿದ ನಂತರ ನ್ಯಾಯಾಲಯವು ಈ ನಿರ್ದೇಶನ ನೀಡಿತ್ತು. ಆದರೆ ನಮ್ಮ ಬೇಡಿಕೆಗಳನ್ನು ಈಡೇರಿಸದ ಕಾರಣ ನಾವು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ನಿನ್ನೆ ಪ್ರತಿಭಟನಾನಿರತ ವೈದ್ಯರು ಹೇಳಿದ್ದರು.
ನಂತರ ಬಿಕ್ಕಟ್ಟನ್ನು ಪರಿಹರಿಸಲು ರಾಜ್ಯ ಸರ್ಕಾರ, ಕಿರಿಯ ವೈದ್ಯರನ್ನು ಮಾತುಕತೆಗೆ ಆಹ್ವಾನಿಸಿತ್ತು. ರಾಜ್ಯ ಸಚಿವಾಲಯ 'ನಬಣ್ಣ'ದಲ್ಲಿ ಸಭೆಗೆ ಆಹ್ವಾನಸಲಾಗಿತ್ತು.
ರಾಜ್ಯ ಆರೋಗ್ಯ ಕಾರ್ಯದರ್ಶಿಯವರಿಂದ ಸಭೆಗೆ ಬರುವಂತೆ ನಮಗೆ ಮೇಲ್ ಬಂದಿದೆ. ಆದರೆ ನಾವು ರಾಜೀನಾಮೆ ಕೇಳುತ್ತಿರುವವರಿಂದಲೇ ನಮಗೆ ಮೇಲ್ ಬಂದಿರುವುದು "ಅವಮಾನಕರ" ಎಂದು ಪ್ರತಿಭಟನಾನಿರತ ವೈದ್ಯರು ಟೀಕಿಸಿದ್ದಾರೆ.
ಸಭೆಗೆ ಹಾಜರಾಗಲು ಪ್ರತಿನಿಧಿಗಳ ಸಂಖ್ಯೆಯನ್ನು 10ಕ್ಕೆ ಸೀಮಿತಗೊಳಿಸಿರುವುದು ಸಹ "ಅವಮಾನಕರ" ಎಂದು ಅವರು ಹೇಳಿದ್ದಾರೆ.
ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಸ್ನಾತಕೋತ್ತರ ವೈದ್ಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ವೈದ್ಯೆಯ ಶವ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಕಿರಿಯ ವೈದ್ಯರು ಆಗಸ್ಟ್ 9 ರಂದು ತಮ್ಮ ಪ್ರತಿಭಟನೆ ಪ್ರಾರಂಭಿಸಿದ್ದರು.
Advertisement