ನವದೆಹಲಿ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆಯಲ್ಲಿ ಹಿಂಸಾಚಾರ, ಗಲಭೆ ಸಂಭವಿಸಿರುವ ಮಂಡ್ಯ ಜಿಲ್ಲೆ ನಾಗಮಂಗಲಕ್ಕೆ ನಾಳೆ ಭೇಟಿ ನೀಡುವುದಾಗಿ ಕೇಂದ್ರ ಭಾರಿ ಮತ್ತು ಉಕ್ಕು ಖಾತೆ ಸಚಿವ ಎಚ್. ಡಿ. ಕುಮಾರಸ್ವಾಮಿ ಗುರುವಾರ ತಿಳಿಸಿದ್ದು, ಅಮಾಯಕ ಜನರನ್ನು ಬಂಧಿಸದಂತೆ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ನಿಷ್ಕ್ರಿಯಗೊಳಿಸಿದೆ. ಇದರ ನೇರ ಪರಿಣಾಮವಾಗಿ ಹಿಂಸಾಚಾರದ ಘಟನೆ ನಡೆದಿದೆ. ರಾಜ್ಯದಲ್ಲಿ ಕೊಲೆ, ದರೋಡೆ ವ್ಯಾಪಕವಾಗಿ ಸಂಭವಿಸುತ್ತಿವೆ. ಇದು ಕಾಂಗ್ರೆಸ್ ಆಡಳಿತದ ದೋಷವಾಗಿದೆ ಎಂದು ಆರೋಪಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೋಮು ಘರ್ಷಣೆಗಳು ಏಕೆ ಸಂಭವಿಸರಲಿಲ್ಲ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂತಹ ಘಟನೆ ನಡೆಯುತ್ತಿವೆ ಎಂಬುದು ಜನರಿಗೆ ಗೊತ್ತಿದೆ. ಸಮಾಜದ ರಕ್ಷಣೆಗೆಗಾಗಿ ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ನಾಗಮಂಗಲ ಘಟನೆಯಲ್ಲಿ ಉದ್ಯಮಿಗಳು ಕೋಟ್ಯಂತರ ರೂ. ಕಳೆದುಕೊಂಡಿದ್ದಾರೆ ನಿಮಗೆ ಸಾಮಾನ್ಯ ಪರಿಜ್ಞಾನವಿದೆಯೇ ಎಂದು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಹಿಂಸಾಚಾರದ ನಂತರ ಕಾಂಗ್ರೆಸ್ ನಾಯಕರು ನನಗೆ ಪಾಠ ಹೇಳುತ್ತಿದ್ದಾರೆ. ನನ್ನ ಕೆಲಸ ಮಾಡಿದ್ದ ವ್ಯಕ್ತಿ ನನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ಹೇಗೆ ಆಡಳಿತ ನಿರ್ವಹಿಸಿದ್ದೆ. ಆಗ ಯಾಕೆ ಕೋಮು ಸಂಘರ್ಷದ ಘಟನೆಗಳು ಸಂಭವಿಸಿರಲಿಲ್ಲ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ ವಿನಾಶದ ಹಾದಿಯಲ್ಲಿರುವಾಗ ಆ ದಿನಗಳು ಬಹು ದೂರ ಇಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಹಿಂಸಾಚಾರ ಘಟನೆ ನೆಪದಲ್ಲಿ ಎಲ್ಲರನ್ನು ಪೊಲೀಸ್ ಠಾಣೆಗೆ ಎಳೆದೊಯ್ಯಲಾಗುತ್ತಿದ್ದು, ಬಂಧನ ಮಾಡಲಾಗುತ್ತಿದೆ. ಸುಮಾರು 50 ಮಂದಿ ಬಂಧನಕ್ಕೊಳಗಾಗಿದ್ದು, ಮತ್ತಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆಯಿದೆ. ನಿಜವಾದ ದುಷ್ಕರ್ಮಿಗಳು ತಪ್ಪಿಸಿಕೊಂಡಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದವರನ್ನು ಬಂಧಿಸಿದರೆ ಕುಟುಂಬಕ್ಕೆ ಏಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಅಮಾಯಕ ಜನರ ಬಂಧನವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ನಾಳೆ ಬೆಳಗ್ಗೆ ನಾಗಮಂಗಲಕ್ಕೆ ಭೇಟಿ ನೀಡಿ, ಸ್ಥಳವನ್ನು ಪರಿಶೀಲಿಸುತ್ತೇನೆ. ಏನು ನಡೆಯಿತು ಎಂಬುದರ ಬಗ್ಗೆ ಜನರಿಂದ ಮಾಹಿತಿ ಪಡೆಯುತ್ತೇನೆ. ಸರ್ಕಾರ ಕೂಡಾ ಸತ್ಯವನ್ನು ಹೇಳಬೇಕು. ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಎಸೆದಿರುವುದನ್ನು ಮಾಧ್ಯಮಗಳು ವರದಿ ಮಾಡಿದ್ದು, ಇದೊಂದು ಪೂರ್ವ ನಿಯೋಜಿತ ಯೋಜನೆ ಎಂಬುದನ್ನು ತೋರಿಸುತ್ತಿದೆ. ಎಲ್ಲಾ ಮಾಹಿತಿ ಪಡೆದು ಮಾಧ್ಯಮಗಳ ಮುಂದೆ ಬಹಿರಂಗಪಡಿಸುತ್ತೇನೆ ಎಂದರು.
Advertisement